ಹೈದರಾಬಾದ್: ಬೆರಳಿನ ಗಾಯದಿಂದಾಗಿ ಆರಂಭಿಕ ಬ್ಯಾಟ್ಸ್‌ಮನ್ ರುತುರಾಜ್ ಗಾಯಕ್ವಾಡ್ ಅವರು ದಕ್ಷಿಣ ಆಫ್ರಿಕಾ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಯಿಂದ ಹೊರಗುಳಿದಿದ್ದಾರೆ. ಭಾರತ ಎ ತಂಡದ ಭಾಗವಾಗಿ ಪ್ರಸ್ತುತ ದಕ್ಷಿಣ ಆಫ್ರಿಕಾದಲ್ಲಿರುವ ಅಭಿಮನ್ಯು ಈಶ್ವರನ್ ಅವರನ್ನು ಗಾಯಕ್ವಾಡ್ ಬದಲಿಗೆ ಹೆಸರಿಸಲಾಗಿದೆ.
ಗ್ಕೆಬರ್ಹಾದಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಭಾರತದ ಎರಡನೇ ಏಕದಿನ ಪಂದ್ಯದ ವೇಳೆ ಫೀಲ್ಡಿಂಗ್ ಮಾಡುವಾಗ ಗಾಯಕ್ವಾಡ್ ಅವರ ಬಲ ಉಂಗುರದ ಬೆರಳಿಗೆ ಗಾಯವಾಗಿತ್ತು. ಗಾಯಕ್ವಾಡ್ ಅವರನ್ನು ಸ್ಕ್ಯಾನ್ ಮಾಡಲಾಗಿದೆ ಮತ್ತು ತಜ್ಞರ ಸಮಾಲೋಚನೆಯ ನಂತರ ವೈದ್ಯಕೀಯ ತಂಡವು ಅವರನ್ನು ಪ್ರವಾಸದ ಉಳಿದ ಭಾಗದಿಂದ ಹೊರಗಿಟ್ಟಿದೆ ಎಂದು ಬಿಸಿಸಿಐ ಹೇಳಿದೆ. ಗಾಯಕ್ವಾಡ್ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್ಸಿಎ)ಯಲ್ಲಿ ಚಿಕಿತ್ಸೆ ಪಡೆಯಲಿದ್ದಾರೆ.
ಬಂಗಾಳದಲ್ಲಿ ಈಶ್ವರನ್ ಆರಂಭಿಕರಾಗಿ ಆಡುತ್ತಾ ಬಂದಿದ್ದಾರೆ. ಭಾರತ ತಂಡದಲ್ಲಿ ಹಲವು ಬಾರಿ ಸ್ಟ್ಯಾಂಡ್‌ಬೈ ಆಟಗಾರಾರು ಇದ್ದರು. ಕಳೆದ ವರ್ಷ ಬಾಂಗ್ಲಾದೇಶ ಪ್ರವಾಸ, 2021ರ ಇಂಗ್ಲೆಂಡ್ ವಿರುದ್ಧದ ತವರಿನ ಸರಣಿಯಲ್ಲೂ ಸ್ಟ್ಯಾಂಡ್‌ಬೈ ಆಟಗಾರರಲ್ಲಿ ಒಬ್ಬರಾಗಿ ಹೆಸರಿಸಲ್ಪಟ್ಟರು.
ಸೆಂಚುರಿಯನ್‌ನಲ್ಲಿ ಬಾಕ್ಸಿಂಗ್ ಡೇ (ಡಿಸೆಂಬರ್ 26) ರಂದು ಪ್ರಾರಂಭವಾಗುವ ಸರಣಿಯ ಆರಂಭಿಕ ಪಂದ್ಯಕ್ಕೆ ರೋಹಿತ್ ಮತ್ತು ಯಶಸ್ವಿ ಜೈಸ್ವಾಲ್ ಮೊದಲ ಆಯ್ಕೆಯ ಆರಂಭಿಕ ಜೋಡಿಯಾಗಿ ಕಣಕ್ಕಿಳಿಯಲಿದ್ದಾರೆ. ಈಶ್ವರನ್ ಎರಡನೇ ಕೇಪ್ ಟೌನ್ ಟೆಸ್ಟ್‌ಗೆ (2024, ಜನವರಿ 3 - 7) ತಂಡವನ್ನು ಸೇರಿಕೊಳ್ಳುವ ನಿರೀಕ್ಷೆ ಇದೆ.