ಬೆಂಗಳೂರು:ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಎಂದಾಕ್ಷಣ 2009 ರಿಂದ ಆರ್ಸಿಬಿಯಲ್ಲಿ ಜರ್ನಿ ಆರಂಭಿಸಿ ಅದೇ ತಂಡದಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನಲ್ಲಿ ಮುಂದುವರೆದಿರುವ ವಿರಾಟ್ ಕೊಹ್ಲಿ, 360 ಪ್ಲೇಯರ್ ಎಬಿ ಡಿವಿಲಿಯರ್ಸ್ ಮತ್ತು ಬ್ಯಾಟಿಂಗ್ ದೈತ್ಯ ಕ್ರಿಸ್ ಗೇಲ್ ನೆನಪಾಗುತ್ತಾರೆ. ತಂಡ ಕಪ್ ಗೆಲ್ಲದಿದ್ದರೂ ಇವರ ಆಟಕ್ಕೆ ಪ್ರೇಕ್ಷಕರು ಫಿದಾ ಆಗಿದ್ದಾರೆ. ಅತಿ ಹೆಚ್ಚು ಅಭಿಮಾನಿಗಳನ್ನು ಗಳಿಸಿರುವ ಮೂವರು ಕ್ರಿಕೆಟಿಗರಲ್ಲಿ ಇಬ್ಬರಿಗೆ ಆರ್ಸಿಬಿ ಹಾಲ್ ಆಫ್ ಫೇಮ್ ಗೌರವ ನೀಡುತ್ತಿದೆ.
ಟೆಸ್ಟ್ ಪಂದ್ಯಗಳ ನಂತರ ಏಕದಿನ ಸರಣಿಗೂ ಮುನ್ನ ವಿರಾಟ್ ಕೊಹ್ಲಿ ಮುಂಬೈನಲ್ಲಿರುವ ತಂಡವನ್ನು ಸೇರಿದ್ದರು. ಈ ವೇಳೆ, ಆನ್ಲೈನ್ ಮುಖಾಂತರ ಕ್ರಿಸ್ ಗೇಲ್ ಮತ್ತು ಎಬಿ ಡಿವಿಲಿಯರ್ಸ್ ಜೊತೆಗೆ ಕಾರ್ಯಕ್ರಮ ಆಯೋಜಿಸಿದ್ದು, ಇದರಲ್ಲಿ ನಿವೃತ್ತಿ ಘೋಷಿಸಿರುವ ಇಬ್ಬರು ಕ್ರಿಕೆಟಿಗರಿಗೆ ಹಾಲ್ ಆಫ್ ಫೇಮ್ ಗೌರವದ ಬಗ್ಗೆ ಘೋಷಣೆ ಮಾಡಲಾಯಿತು.
ಮಾರ್ಚ್ 26 ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾರ್ಯಕ್ರಮ ಆಯೋಜನೆ ಮಾಡಿದ್ದು, ಈ ವೇದಿಕೆಯಲ್ಲಿ ಇಬ್ಬರಿಗೆ ಈ ಗೌರವವನ್ನು ನೀಡಲಾಗುತ್ತಿದೆ. ಕಾರ್ಯಕ್ರಮಕ್ಕೂ ಮುನ್ನ ತಂಡದ ಅಭ್ಯಾಸ ನಡೆಯಲಿದೆ. ನಂತರ ಕಾರ್ಯಕ್ರಮ ಆಯೋಜನೆಗೊಂಡಿದ್ದು, ಗೌರವ ಸಮರ್ಪಣೆ ನಂತರ ಸೋನು ನಿಗಮ್ ಮತ್ತು ಜೇಸನ್ ದೇರುಲೋ ಅವರಿಂದ ಲೈವ್ ಸಂಗೀತ ಕಾರ್ಯಕ್ರಮ ನಡೆಯಲಿದೆ. ಈ ಬಗ್ಗೆ ಆರ್ಸಿಬಿ ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್ನಲ್ಲಿ ಮಾಹಿತಿ ಹಂಚಿಕೊಂಡಿದೆ. "ಜರ್ಸಿ ಸಂಖ್ಯೆ 17 ಮತ್ತು 333 ಅನ್ನು ಗೌರವಾರ್ಥ ಹಾಲ್ ಆಫ್ ಫೇಮ್ ನೀಡಲಾಗುತ್ತಿದೆ" ಎಂದು ಬರೆದುಕೊಂಡಿದೆ.