ಮೀರ್‌ಪುರ್ (ಬಾಂಗ್ಲಾದೇಶ): ಬಾಂಗ್ಲಾದೇಶ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಯನ್ನು ಭಾರತ ಮಹಿಳಾ ತಂಡ ಗೆದ್ದಿದೆ. ಮಂಗಳವಾರ ಮೀರ್ಪುರದಲ್ಲಿ ನಡೆದ ಎರಡನೇ ಪಂದ್ಯದಲ್ಲಿ 8 ವಿಕೆಟ್ಗಳ ರೋಚಕ ಗೆಲುವು ದಾಖಲಿಸಿ, ಸರಣಿಯಲ್ಲಿ 2-0 ಅಂತರದಿಂದ ಮುನ್ನಡೆ ಸಾಧಿಸಿದೆ. ಜುಲೈ 13ರಂದು ಕೊನೆಯ ಹಾಗೂ ಅಂತಿಮ ಪಂದ್ಯ ನಡೆಯಲಿದ್ದು, ಕ್ಲೀನ್ಸ್ವಿಪ್ ಭಾರತೀಯ ವನಿತೆಯರು ಕಣ್ಣಿಟ್ಟಿದ್ದಾರೆ.
ಟಾಸ್ ಗೆದ್ದ ಟೀಂ ಇಂಡಿಯಾದ ನಾಯಕಿ ಹರ್ಮನ್‌ಪ್ರೀತ್ ಕೌರ್ ಮೊದಲ ಬ್ಯಾಟಿಂಗ್ ಆಯ್ದುಕೊಂಡರು. ಆದರೆ, ಬ್ಯಾಟಿಂಗ್ನಲ್ಲಿ ಭಾರತೀಯ ಆಟಗಾರ್ತಿಯರು ಸಂಪೂರ್ಣ ವಿಫಲರಾದರು. ಯಾರೊಬ್ಬರು ಸಹ 20 ರನ್ಗಳ ಗಡಿದಾಟಲು ಸಾಧ್ಯವಾಗಲಿಲ್ಲ. ಪರಿಣಾಮ ನಿಗದಿತ 20 ಓವರ್‌ಗಳಲ್ಲಿ ಎಂಟು ವಿಕೆಟ್ ಕಳೆದುಕೊಂಡು ಕೇವಲ 95 ರನ್ ಕಲೆ ಹಾಕಲು ಮಾತ್ರ ಭಾರತಕ್ಕೆ ಸಾಧ್ಯವಾಯಿತು. ಬಾಂಗ್ಲಾ ತಂಡ 87 ರನ್ಗಳಿಗೆ ಸರ್ವಪತನ ಕಂಡು ಸೋಲೊಪ್ಪಿಕೊಂಡಿತು.
ಆರಂಭಿಕರಾದ ಸ್ಮೃತಿ ಮಂಧಾನ 13 ರನ್ ಕಲೆ ಹಾಕಿ ವಿಕೆಟ್ ಒಪ್ಪಿಸಿದರು. ಇದಾದ ಸ್ವಲ್ಪ ಹೊತ್ತಿನಲ್ಲೇ ಶಫಾಲಿ ವರ್ಮಾ ಸಹ 19 ರನ್ಗಳಿಸಿ ನಿರ್ಗಮಿಸಿದರು. ಮತ್ತೊಂದೆಡೆ, ನಾಯಕಿ ಹರ್ಮನ್‌ಪ್ರೀತ್ ಕೌರ್ ಶೂನ್ಯಕ್ಕೆ ಪೆವಿಲಿಯನ್ ಹಾದಿ ಹಿಡಿದರು. ಆಗ ಭಾರತ ತಂಡದ ಮೊತ್ತ ಕೇವಲ 33 ರನ್ ಆಗಿತ್ತು. ನಂತರದಲ್ಲಿ ಯಾಸ್ತಿಕಾ ಭಾಟಿಯಾ (11), ರಾಡ್ರಿಗಸ್ (8), ಹರ್ಲೀನ್ ಡಿಯೋಲ್ (6), ದೀಪ್ತಿ ಶರ್ಮಾ (10), ಅಮನ್ಜೋತ್ ಕೌರ್ 14 ರನ್ಗಳಿಗೆ ಔಟಾದರು. ಪೂಜಾ ವಸ್ತ್ರಕರ್ ಅಜೇಯ 7 ರನ್ ಮಿನ್ನು ಮಣಿ ಅಜೇಯ 5 ರನ್ ಕೊಡುಗೆ ನೀಡಿದರು.
ಅಂತಿಮವಾಗಿ ಭಾರತೀಯ ವನಿತೆಯರು 95 ರನ್ ಕಲೆ ಪೇರಿಸಿದರು. ಇದು ಟಿ- 20 ಪಂದ್ಯದಲ್ಲಿ ಬಾಂಗ್ಲಾದೇಶದ ವಿರುದ್ಧ ಭಾರತದ ಅತ್ಯಂತ ಕನಿಷ್ಠ ಮೊತ್ತ ಇದಾಗಿದೆ. ಬಾಂಗ್ಲಾ ಪರವಾಗಿ ಸುಲ್ತಾನಾ ಖಾತುನ್ ಮೂರು ವಿಕೆಟ್, ಫಾತೀಮಾ ಖುತಾನ್ ಎರಡು ವಿಕೆಟ್ ಪಡೆದು ಮಿಂಚಿದರು. ಮಾರುಫಾ ಆಕ್ಟರ್, ನಹಿದಾ ಆಕ್ಟರ್ ಹಾಗೂ ರಬೇಯಾ ಖಾನ್ ತಲಾ ವಿಕೆಟ್ ಪಡೆದರು.