ಲಾರ್ಡ್ಸ್ (ಲಂಡನ್): ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯುತ್ತಿರುವ ಆ್ಯಶನ್ ಸರಣಿಯ ಎರಡನೇ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಗೆಲುವಿನ ನಗೆ ಬೀರಿದೆ. ಇಂಗ್ಲೆಂಡ್ ವಿರುದ್ಧ ಆಸ್ಟ್ರೇಲಿಯಾ 43 ರನ್ಗಳ ಜಯವನ್ನು ಸಾಧಿಸಿದೆ. ಗೆಲುವಿನ ಬೆನ್ನತ್ತಿದ್ದ ಇಂಗ್ಲೆಂಡ್ ತಂಡಕ್ಕೆ ನಿರಾಸೆಯಾಗಿದೆ. ಮೊದಲ ಪಂದ್ಯದಲ್ಲಿ ಗೆದ್ದು ಬೀಗಿದ್ದ ಆಸ್ಟ್ರೇಲಿಯಾ ಎರಡನೇ ಪಂದ್ಯದಲ್ಲೂ ಗೆಲುವಿನ ಆಟವನ್ನು ಮುಂದುವರೆಸಿತು.
ಇಂದು ಇಂಗ್ಲೆಂಡ್ ಗೆಲುವಿಗೆ 257 ರನ್ ಅಗತ್ಯತೆ ಇತ್ತು. ಮೊದಲ ಸೆಷನ್ನಲ್ಲಿ ಇಂಗ್ಲೆಂಡ್ ಎರಡು ವಿಕೆಟ್ ಕಳೆದುಕೊಂಡು 129 ರನ್ ಗಳಿಸಿತ್ತು. ಬೆನ್ ಡಕೆಟ್ ಮತ್ತು ನಾಯಕ ಸ್ಟೋಕ್ಸ್ ಜೋಡಿ ಭಾನುವಾರ ಆಂಗ್ಲರ ತಂಡಕ್ಕೆ ಉತ್ತಮ ಆಸರೆ ಆದರಲ್ಲದೇ ಅವರ ಬೇಸ್ಬಾಲ್ ನೀತಿಯಂತೆ ಬ್ಯಾಟ್ ಬೀಸಿದರು. ಭೋಜನ ವಿರಾಮದ ವೇಳೆಗೆ ಇಂಗ್ಲೆಂಡ್ 6 ವಿಕೆಟ್ ನಷ್ಟಕ್ಕೆ 243 ರನ್ ಗಳಿಸಿತ್ತು.
ಡಕೆಟ್ ನಂತರ ಬಂದ ಜಾನಿ ಬೈರ್‌ಸ್ಟೋವ್ ಹೆಚ್ಚು ಹೊತ್ತು ಕ್ರೀಸ್ನಲ್ಲಿ ನಿಲ್ಲಲಿಲ್ಲ. ಆದರೆ ನಾಯಕನ ಆಟವನ್ನು ಏಕಾಂಗಿಯಾಗಿ ಹೋರಾಡಿ ತಂಡಕ್ಕಾಗಿ ಆಡುತ್ತಾ ಸಾಗಿದರು. ಇದರಿಂದ ಅವರ ಖಾತೆಗೆ 13ನೇ ಶತಕ ಸೇರಿಕೊಂಡಿತು. ಭೋಜನ ವಿರಾಮದ ವೇಳೆಗೆ ಕ್ರೀಸ್ನಲ್ಲಿ 1 ರನ್ನಿಂದ ಸ್ಟೂವರ್ಟ್ ಬ್ರಾಡ್ ಮತ್ತು 108 ರನ್ ಗಳಿಸಿದ ಸ್ಟೋಕ್ಸ್ ಇದ್ದರು. ಅಂತಿಮವಾಗಿ ಇಂಗ್ಲೆಂಡ್ ವಿರುದ್ಧ ಆಸ್ಟ್ರೇಲಿಯಾ 43 ರನ್ಗಳಿಂದ ಗೆಲುವು ಸಾಧಿಸಿತು.
ಬುಧವಾರದಿಂದ ಆರಂಭವಾಗಿದ್ದ ಎರಡನೇ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ಮೊದಲು ಬೌಲಿಂಗ್ ಆಯ್ದುಕೊಂಡಿತ್ತು. ಆಸ್ಟ್ರೇಲಿಯಾ ತನ್ನ ಮೊದಲ ಇನ್ನಿಂಗ್ಸ್ನಲ್ಲಿ ಸ್ಟೀವನ್ ಸ್ಮಿತ್ ಭರ್ಜರಿ ಶತಕದೊಂದಿಗೆ(110) 416 ರನ್ ಪೇರಿಸಿತ್ತು. ಬಳಿಕ ತನ್ನ ಮೊದಲ ಇನ್ನಿಂಗ್ಸ್ ಆರಂಭಿಸಿದ್ದ ಇಂಗ್ಲೆಂಡ್ 325 ರನ್ಗಳಿಗೆ ಸರ್ವಪತನ ಕಂಡಿತು. ಇದರಿಂದ 91 ರನ್ಗಳ ಹಿನ್ನಡೆಯನ್ನು ಆಂಗ್ಲರು ಅನುಭವಿಸಿದ್ದರು.
ಎರಡನೇ ಇನ್ನಿಂಗ್ಸ್ ಆರಂಭಿಸಿದ್ದ ಆಸ್ಟ್ರೇಲಿಯಾವು 279 ರನ್ ಮಾತ್ರ ಕಲೆ ಹಾಕಿ 371 ರನ್ಗಳ ಗುರಿಯನ್ನು ಎದುರಾಳಿ ತಂಡಕ್ಕೆ ನೀಡಿತ್ತು. ತನ್ನ ಎರಡನೇ ಇನ್ನಿಂಗ್ಸ್ನಲ್ಲಿ ಈ ಗುರಿ ಬೆನ್ನಟ್ಟಿದ್ದ ಇಂಗ್ಲೆಂಡ್ ಆರಂಭಿಕ ಆಘಾತವನ್ನು ಎದುರಿಸಿತು. ಇದರ ನಡುವೆಯೇ ಬೆನ್ ಡಕೆಟ್ (83) ಹಾಗೂ ನಾಯಕ ಬೆನ್ ಸ್ಟೋಕ್ಸ್ (155) ವೀರೋಚಿತ ಆಟದೊಂದಿಗೆ ಗೆಲುವಿನ ಆಸೆ ಚಿಗುರಿಸಿದರು. ಅದರಲ್ಲೂ ನಾಯಕ ಸ್ಟೋಕ್ಸ್ ಭರ್ಜರಿ 9 ಸಿಕ್ಸರ್ ಹಾಗೂ 9 ಬೌಂಡರಿಗಳ ಮೂಲಕ ವೀರಾವೇಶದ ಆಟವನ್ನು ಪ್ರದರ್ಶಿಸಿದರು. ಆದರೆ ತಂಡ ಮೊತ್ತ 301 ರನ್ ಆಗಿದ್ದಾಗ ಸ್ಟೋಕ್ಸ್ ನಿರ್ಗಮಿಸಿದರು. ಇದರಿಂದ ಇಂಗ್ಲೆಂಡ್ ಮತ್ತೆ ಕುಸಿಯಿತು. ನಂತರ ಓಲಿ ರಾಬಿನ್ಸ್ ಸನ್ (1) , ಸ್ಟುವರ್ಟ್ ಬ್ರಾಡ್ (11), ಜೋಸ್ ಟಂಗ್ 19 ರನ್ ಮಾತ್ರ ಗಳಿಸಲು ಶಕ್ತರಾದರು. ಇದರೊಂದಿಗೆ ಅತಿಥೇಯ ಆಂಗ್ಲರು ಅಂತಿಮವಾಗಿ 81.3 ಓವರ್ಗಳಲ್ಲಿ 327 ರನ್ ಪೇರಿಸಿ ಸೋಲನ್ನು ಒಪ್ಪಿಕೊಂಡರು.
ಇದನ್ನೂ ಓದಿ :Ashes 2023: ಲಾರ್ಡ್ಸ್ ಟೆಸ್ಟ್ ಗೆಲ್ಲಲು ಆಸಿಸ್‌ಗೆ ಬೇಕು 6 ವಿಕೆಟ್, ಇಂಗ್ಲೆಂಡ್ಗೆ ಬೇಕು 257 ರನ್