ಬಾಲಿ(ಇಂಡೋನೇಷಿಯಾ) :ಎರಡು ಬಾರಿಯ ಒಲಿಂಪಿಕ್ ಪದಕ ವಿಜೇತೆ ಪಿವಿ ಸಿಂಧು ವಿಶ್ವ ಟೂರ್ ಫೈನಲ್ಸ್ನ ಪ್ರಶಸ್ತಿ ಸುತ್ತಿನಲ್ಲಿ ಸೋಲು ಕಾಣುವ ಮೂಲಕ ರನ್ನರ್ ಅಪ್ಗೆ ತೃಪ್ತಿಪಟ್ಟಿದ್ದಾರೆ.
ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ವಿಶ್ವ ಚಾಂಪಿಯನ್ ಸಿಂಧು 6ನೇ ಶ್ರೇಯಾಂಕದ ದಕ್ಷಿಣ ಕೊರಿಯಾದ ಆನ್ ಸೆಯಾಂಗ್ ವಿರುದ್ಧ 16-21, 12-21ರ ಅಂತರದಲ್ಲಿ ಸೋಲುಂಡರು.
ಅದ್ಭುತ ಫಾರ್ಮ್ನಲ್ಲಿದ್ದ 19 ವರ್ಷದ ಯಂಗ್ ವಿರುದ್ಧ ಭಾರತೀಯ ಶಟ್ಲರ್ ಮಂಕಾದರು. ಆರಂಭದಿಂದಲೂ ಸಿಂಧು ಮೇಲೆ ಒತ್ತಡ ಹೇರಿದ 6ನೇ ಶ್ರೇಯಾಂಕದ ಶಟ್ಲರ್, ಯಾವುದೇ ಹಂತದಲ್ಲಿ ತಿರುಗಿ ಬೀಳಲು ಅವಕಾಶ ನೀಡದೇ ಕೇವಲ 39 ನಿಮಿಷಗಳಲ್ಲಿ ಪಂದ್ಯವನ್ನು ಗೆದ್ದುಕೊಂಡರು.
ಒಲಿಂಪಿಕ್ಸ್ ನಂತರ ಅತ್ಯುತ್ತಮ ಪ್ರದರ್ಶನ ತೋರುತ್ತಿರುವ ಸೆಯಾಂಗ್ ವರ್ಷದ ಕೊನೆಯ ಟೂರ್ನಮೆಂಟ್ ಸೇರಿದಂತೆ ಸತತ 3 ಟೈಟಲ್ ತಮ್ಮದಾಗಿಸಿಕೊಂಡರು. ಇದಕ್ಕೂ ಮುನ್ನ ಅವರು ಇಂಡೋನೇಷಿಯಾ ಮಾಸ್ಟರ್ಸ್ ಮತ್ತು ಇಂಡೋನೇಷಿಯಾ ಓಪನ್ ಪ್ರಶಸ್ತಿಗಳನ್ನು ಗೆದ್ದಿದ್ದರು.
ಇನ್ನು ಪಿವಿ ಸಿಂಧು 3ನೇ ಬಾರಿ ಫೈನಲ್ ತಲುಪಿದರೂ ರನ್ನರ್ ಅಪ್ಗೆ ತೃಪ್ತಿಪಟ್ಟುಕೊಂಡು 60,000 ಡಾಲರ್ ಮೊತ್ತವನ್ನು ಪಡೆದರು. 2018ರಲ್ಲಿ ಪಿವಿ ಸಿಂಧು ವರ್ಷದ ಕೊನೆಯ ಟೂರ್ನಮೆಂಟ್ನಲ್ಲಿ ಚಾಂಪಿಯನ್ ಆಗಿದ್ದರು.
ಇದೊಂದು ಒಳ್ಳೆಯ ಪಂದ್ಯವಾಗಿತ್ತು. ಸೆಯಾಂಗ್ ಒಳ್ಳೆಯ ಆಟಗಾರ್ತಿಯಾಗಿದ್ದಾರೆ. ಅವರ ವಿರುದ್ಧ ಆಡುವುದು ಸುಲಭದ ಮಾತಲ್ಲ. ಆದರೂ ನಾನು ಪೈಪೋಟಿ ನೀಡಲು ತಯಾರಾಗಿ ಬಂದಿದ್ದೆ. ನಾನು ಆರಂಭದಲ್ಲೇ ಅವರಿಗೆ ಪಾಯಿಂಟ್ ಕೊಟ್ಟಿದ್ದರಿಂದ ಪಂದ್ಯದಲ್ಲಿ ಕಮ್ಬ್ಯಾಕ್ ಮಾಡಲು ಸಾಧ್ಯವಾಗಲಿಲ್ಲ.
ಇದು ಸ್ವಲ್ಪ ಬೇಸರವಾಗಿದೆ. ಆದರೆ, ಈ ಸೋಲಿನಿಂದ ಸಾಕಷ್ಟು ಕಲಿತಿದ್ದೇನೆ. ಬಾಲಿಯಲ್ಲಿ 3 ಒಳ್ಳೆಯ ವಾರಗಳನ್ನು ಕಳೆದಿದ್ದೇನೆ. ಇಲ್ಲಿಂದ ಸಾಕಷ್ಟು ಸಕಾರಾತ್ಮಕ ಅಂಶಗಳನ್ನು ಪಡೆದಿರುವೆ. ಮುಂಬರುವ ವಿಶ್ವಚಾಂಪಿಯನ್ಶಿಪ್ಗೆ ತಯಾರಿ ಮಾಡಿಕೊಳ್ಳುವೆ ಎಂದು ಪಂದ್ಯ ಸೋತ ನಂತರ ಪಿವಿ ಸಿಂಧು ಹೇಳಿದ್ದಾರೆ.
ಇದನ್ನೂ ಓದಿ: ಗುಜರಾತ್ ಶಾಲೆಯಲ್ಲಿ ಮಕ್ಕಳಿಗೆ ನೀರಜ್ ಚೋಪ್ರಾ ತರಬೇತಿ: ವಿಡಿಯೋ ಹಂಚಿಕೊಂಡ ಮೋದಿ