ಮುಗುಳು ನಗು ತುಂಬಿದ ಈ ಮುದ್ದಾದ ಮುಖವನ್ನು ನೋಡಿದ ಕೂಡಲೇ ಹುಡುಗಿಯರು ಫಿದಾ ಆಗುವುದಂತೂ ಗ್ಯಾರಂಟಿ. ಲವರ್ ಬಾಯ್ ಆಗಿ ರಕ್ಷಾಬಂಧನದಲ್ಲಿ ಕಾಣಿಸಿಕೊಂಡ ಸಮೀಪ್ ಇದೀಗ ಮದುವೆಯಾಗಿದ್ದಾರೆ. ವಿಭಿನ್ನ ಶೇಡ್ ಇರುವ ವಿರಾಟ್ ಮಹಾದೇವನ್ ಪಾತ್ರಕ್ಕೆ ಜೀವ ತುಂಬುವಲ್ಲಿ ಯಶಸ್ವಿಯಾಗಿರುವ ಸಮೀಪ್, ಮೊದಲ ಬಾರಿ ಬಣ್ಣ ಹಚ್ಚಿದ್ದು ಹಿಂದಿ ಧಾರಾವಾಹಿಗೆ. ಮೂಲತಃ ಉಡುಪಿಯವರಾದ ಸಮೀಪ್ ಹುಟ್ಟಿ ಬೆಳೆದಿದ್ದೆಲ್ಲಾ ದೂರದ ಮುಂಬೈನಲ್ಲಿ. ಇದೀಗ ಕನ್ನಡದ ಕಿರುತೆರೆ ಪ್ರಿಯರ ಕಣ್ಮಣಿ. ನಂದಿತಾ ಯಾದವ್ ಅವರ ಸಲಹೆ ಮೇರೆಗೆ ಸ್ಟಾರ್ ಸುವರ್ಣದಲ್ಲಿ ನಡೆಯುತ್ತಿದ್ದ ಆಡಿಶನ್ನಲ್ಲಿ ಭಾಗವಹಿಸಿದ ಸಮೀಪ್ ನಟಿಸಲು ಆಯ್ಕೆ ಆಗಿಯೇ ಬಿಟ್ಟರು.
ಯುವತಿಯರ ಮನ ಗೆದ್ದ 'ರಕ್ಷಾಬಂಧನ'ದ ಸಮೀಪ್ ಆಚಾರ್ಯ
ಬಣ್ಣದ ಲೋಕದಲ್ಲಿ ಮಿಂಚುತ್ತಿರುವ ಈ ಚಾಕೊಲೇಟ್ ಬಾಯ್ ಹುಡುಗಿಯರಿಗೆ ಅಚ್ಚುಮೆಚ್ಚು ಎಂದರೆ ತಪ್ಪಾಗಲಾರದು. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ರಕ್ಷಾಬಂಧನ' ಧಾರಾವಾಹಿಯ ವಿರಾಟ್ ಮಹಾದೇವನ್ ಆಗಿ ನಟಿಸುತ್ತಿರುವ ಇವರ ಹೆಸರು ಸಮೀಪ್ ಆಚಾರ್ಯ.
'ಗುಂಡ್ಯಾನ ಹೆಂಡ್ತಿ' ಧಾರಾವಾಹಿಯಲ್ಲಿ ನಾಯಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಅವರಿಗೆ ಅದು ನಿಜಕ್ಕೂ ಚಾಲೆಂಜಿಂಗ್ ಪಾತ್ರವಾಗಿತ್ತು. ಏಕೆಂದರೆ ಆ ಪಾತ್ರದಲ್ಲಿ ಉತ್ತರ ಕರ್ನಾಟಕದ ಭಾಷೆ ಮಾತನಾಡಬೇಕಿತ್ತು. ಆ ಸವಾಲನ್ನು ಸ್ವೀಕರಿಸಿ ಗೆದ್ದ ಸಮೀಪ್ 'ನಾನು ಇಂದು ಕನ್ನಡ ಕಿರುತೆರೆಯಲ್ಲಿ ಮಿಂಚುತ್ತಿದ್ದೇನೆ ಎಂದರೆ ಅದಕ್ಕೆ ನಂದಿತಾ ಯಾದವ್ ಕಾರಣ. ಅವರ ಪ್ರೋತ್ಸಾಹದಿಂದಲೇ ಇದೆಲ್ಲಾ ಸಾಧ್ಯವಾಯಿತು' ಎನ್ನುವ ಈ ಹುಡುಗ ಮುಂದೆ ಗಂಗಾ ಧಾರಾವಾಹಿಯ ಸಾಗರ್ ಆಗಿ ಬದಲಾದರು. ಅಲ್ಲಿಯೂ ನಾಯಕಿ ಗಂಗಾಳ ಮನಸನ್ನು ಸೆಳೆದದ್ದು ಮಾತ್ರವಲ್ಲದೇ ಕಿರುತೆರೆ ವೀಕ್ಷಕರ ಮನಸ್ಸು ಗೆದ್ದರು. ಇದೀಗ ಜಗನ್ ನಿರ್ಮಾಣದ 'ರಕ್ಷಾಬಂಧನ' ಧಾರಾವಾಹಿಯಲ್ಲಿ ವಿರಾಟ್ ಮಹಾದೇವನ್ ಆಗಿ ನಟಿಸುತ್ತಿದ್ದಾರೆ. 'ನಾನು ಇಂದು ರಕ್ಷಾಬಂಧನದಲ್ಲಿ ನಟಿಸುತ್ತಿದ್ದೇನೆ ಎಂದರೆ ಅದಕ್ಕೆ ಜಗನ್ ಅವರೇ ಮುಖ್ಯ ಕಾರಣ. ಜಗನ್ ಅವರ ಪ್ರೋತ್ಸಾಹದಿಂದಲೇ ನಾನು ವಿರಾಟ್ ಪಾತ್ರಕ್ಕೆ ಜೀವ ತುಂಬಲು ಸಾಧ್ಯವಾಯಿತು' ಎಂದು ಸಂತಸದಿಂದ ಹೇಳುತ್ತಾರೆ ಸಮೀಪ್.
ಕಿರುತೆರೆ ಜೊತೆಗೆ ಬೆಳ್ಳಿತೆರೆಯಲ್ಲೂ ತಮ್ಮ ಅದೃಷ್ಟ ಪರೀಕ್ಷೆಗೆ ತಯಾರಾಗಿದ್ದಾರೆ ಸಮೀಪ್. 'ರಾಜಸ್ಥಾನ್ ಡೈರೀಸ್' ಸಿನಿಮಾದಲ್ಲಿ ನಾಯಕನ ಗೆಳೆಯನಾಗಿ ಅಭಿನಯಿಸುವ ಮೂಲಕ ಬೆಳ್ಳಿ ಪರದೆಗೆ ಕಾಲಿಟ್ಟಿದ್ದಾರೆ. ದೂರದ ಮುಂಬೈನಲ್ಲಿ ಹುಟ್ಟಿ ಬೆಳೆದಿರುವ ಸಮೀಪ್ ಇಂದು ಕನ್ನಡ ಕಿರುತೆರೆಯಲ್ಲಿ ಮಿಂಚುತ್ತಿರುವುದಕ್ಕೆ ಕನ್ನಡದ ಮೇಲಿನ ಪ್ರೀತಿಯೇ ಕಾರಣ ಎನ್ನುತ್ತಾರೆ.