ಪ್ರಸ್ತುತ ಮಹಿಳೆಯರಿಗೆ ಸಮಾಜದಲ್ಲಿ ಸವಾಲುಗಳು ಹೆಚ್ಚಾಗಿವೆ. ಸದಾ ಹೊಸತನ ಹಂಬಲಿಸುವ ಧಾರಾವಾಹಿ ವೀಕ್ಷಕರಿಗೆ ಮನರಂಜಿಸಲು ಬರ್ತಿದ್ದಾಳೆ 'ಸತ್ಯ'.
ಸತ್ಯ ಡೋಂಟ್ ಕೇರ್ ಅಟಿಟ್ಯೂಡ್ ಯುವತಿ. ಪ್ರತಿ ತಾಯಿಯೂ ತನ್ನ ಮಗಳು ಹೀಗಿರಬೇಕೆಂದು ಬಯಸುವ ವಿಶಿಷ್ಟ ಪಾತ್ರ ಸತ್ಯಳದ್ದು. ಯಾವುದೇ ಪರಿಸ್ಥಿತಿಯಲ್ಲೂ ತಲೆ ಬಾಗದ ದಿಟ್ಟೆ. ಆಕೆ ಟಾಮ್ ಬಾಯ್ ಹುಡುಗಿ. ಸತ್ಯ ತನ್ನಿಷ್ಟದಂತೆ ಬದುಕುತ್ತಾಳೆ. ಆಕೆಯ ಏರಿಯಾದಲ್ಲಿ ಅವಳೇ ರಾಬಿನ್ ಹುಡ್. ಅವಳು ಹೇಳಿದ್ದೇ ನ್ಯಾಯ. ಆದರೆ ಸನ್ನಿವೇಶಗಳು ಅವಳನ್ನು ಶ್ರೀಮಂತ ಮತ್ತು ದಯಾಳು ಯುವಕ ಕಾರ್ತಿಕ್ ಪ್ರಭುವಿಗೆ ಪರಿಚಯಿಸುತ್ತದೆ. ಇಬ್ಬರಲ್ಲೂ ಸ್ನೇಹ, ಬಾಂಧವ್ಯ ಬೆಳೆಯುತ್ತದೆ. ಆದರೆ ಕಾರ್ತಿಕ್, ಸತ್ಯಾಳ ಅಕ್ಕನನ್ನು ಮದುವೆಯಾಗಲು ಬಯಸುತ್ತಾನೆ. ಆಕೆ ಇವನು ಶ್ರೀಮಂತ ಎಂದು ತಾನು ಪ್ರೀತಿಸಿದ ಹುಡುಗನನ್ನು ತಿರಸ್ಕರಿಸುತ್ತಾಳೆ. ಸತ್ಯ ಈ ಸಮಸ್ಯೆಗಳನ್ನು ಹೇಗೆ ನಿಭಾಯಿಸುತ್ತಾಳೆ ಮತ್ತು ಆಕೆ ಹಾಗೂ ಕಾರ್ತಿಕ್ ನಡುವೆ ಹೇಗೆ ಸಂಬಂಧ ಬೆಳೆಯುತ್ತದೆ ಎನ್ನುವುದು ಈ ಹೊಸ ಧಾರಾವಾಹಿಯ ತಿರುಳು.
ನಾಯಕನ ಚಿಕ್ಕಪ್ಪನಾಗಿ ಅಭಿಜಿತ್ ನಟಿಸುತ್ತಿದ್ದಾರೆ. ಸತ್ಯ ಧಾರಾವಾಹಿಯಲ್ಲಿ ಸತ್ಯ ಪಾತ್ರ ನಿರ್ವಹಿಸುತ್ತಿರುವುದು ಗೌತಮಿ ಜಾದವ್. 2012 ರಲ್ಲಿ ಪ್ರಸಾರವಾಗುತ್ತಿದ್ದ ನಾಗಪಂಚಮಿ ಧಾರಾವಾಹಿಯಲ್ಲಿ ನಟಿಸಿದ್ದರು. ನಂತರ ಕನ್ನಡದ ಮೂರು ಹಾಗೂ ತಮಿಳಿನ ಒಂದು ಸಿನಿಮಾದಲ್ಲಿ ನಟಿಸಿದ್ದರು. ಇದೀಗ ಮತ್ತೆ ಕಿರುತೆಗೆ ವಿಭಿನ್ನ ಲುಕ್ನಲ್ಲಿ ಎಂಟ್ರಿ ಕೊಡುತ್ತಿದ್ದಾರೆ. ಈ ಧಾರಾವಾಹಿಯನ್ನು ಆರ್.ಆರ್.ಆರ್. ಕ್ರಿಯೇಷನ್ಸ್ ನಿರ್ಮಾಣ ಮಾಡುತ್ತಿದ್ದು, ಸ್ವಪ್ನಾ ಕೃಷ್ಣ ನಿರ್ದೇಶಿಸಿದ್ದಾರೆ. ನಾಯಕನ ತಂದೆಯ ಪಾತ್ರದಲ್ಲಿ ಹಿರಿಯ ನಟ ಶ್ರೀನಿವಾಸಮೂರ್ತಿ, ನಾಯಕನ ಚಿಕ್ಕಪ್ಪನಾಗಿ ಅಭಿಜಿತ್, ನಾಯಕನ ತಾಯಿಯಾಗಿ ತ್ರಿವೇಣಿ ನಟಿಸಿದ್ದಾರೆ. ಸತ್ಯ ಪಾತ್ರ ಇಂದಿನ ಸಮಾಜದಲ್ಲಿ ಪ್ರತಿ ಮಹಿಳೆಯೂ ಅನುಸರಿಸಬೇಕಾದ ಪಾತ್ರವಾಗಿದೆ.
ಕಿರುತೆರೆಯಲ್ಲಿ ವಿಶಿಷ್ಟ ಪಾತ್ರಗಳು, ಕಥೆಗಳನ್ನು ಸೃಷ್ಟಿಸುತ್ತಿರುವ ಜೀ ಕನ್ನಡದ ಸತ್ಯ ಧಾರಾವಾಹಿಯಲ್ಲಿ ಅಂತಹುದೇ ದಿಟ್ಟ, ಆದರ್ಶ ಹಾಗೂ ಸ್ವಯಂ ನಿರ್ಧಾರಗಳನ್ನು ಕೈಗೊಳ್ಳುವ ಯುವತಿಯನ್ನು ಚಿತ್ರಿಸಲಾಗಿದೆ ಎಂದು ಜೀ ಕನ್ನಡ ಬ್ಯುಸಿನೆಸ್ ಹೆಡ್ ರಾಘವೇಂದ್ರ ಹುಣಸೂರು ತಿಳಿಸಿದ್ದಾರೆ. ಈ ಧಾರಾವಾಹಿ ಡಿಸೆಂಬರ್ 7 ರಿಂದ ಸೋಮವಾರದಿಂದ ಶುಕ್ರವಾರವರೆಗೆ ರಾತ್ರಿ 9 ಗಂಟೆಗೆ ಪ್ರಸಾರವಾಗಲಿದೆ.