ಎರಡು ದಿನಗಳ ಹಿಂದೆ ಕನ್ನಡದ ಬಿಗ್ ಬಜೆಟ್ ನಿರ್ಮಾಪಕರೆಲ್ಲ ಸೇರಿ ಮೀಟಿಂಗ್ ಮಾಡಿದ್ದಾರೆ. ಯಾವ ಚಿತ್ರವನ್ನು ಯಾವಾಗ ಮತ್ತು ಹೇಗೆ ಬಿಡುಗಡೆ ಮಾಡಬೇಕು ಎಂಬ ವಿಷಯವಾಗಿ ಈ ಸಭೆಯಲ್ಲಿ ಚರ್ಚೆ ಮಾಡಲಾಗಿದೆ ಎಂದು ಮೇಲ್ನೋಟಕ್ಕೆ ಹೇಳಲಾಗುತ್ತಿದೆಯಾದರೂ ಸತ್ಯ ಬೇರೇನೋ ಇದೆ.
ಪ್ರಮುಖವಾಗಿ ಚಿತ್ರಮಂದಿರಗಳಲ್ಲಿ ಪರ್ಸಂಟೇಜ್ ವ್ಯವಸ್ಥೆಯಡಿ ದುಡ್ಡು ಹಂಚಿಕೆಯಾಗುತ್ತಿರುವ ಬಗ್ಗೆ ದೊಡ್ಡ ಬಜೆಟ್ನ ನಿರ್ಮಾಪಕರಿಗೆ ಆತಂಕ ಶುರುವಾಗಿದೆ. ಮುಂಚೆಯೆಲ್ಲ ಬಾಡಿಗೆ ವ್ಯವಸ್ಥೆಯಲ್ಲಿ ವಾರಕ್ಕೆ ಇಷ್ಟು ಎಂಬ ಲೆಕ್ಕದಲ್ಲಿ ಬಾಡಿಗೆ ಕಟ್ಟಲಾಗುತ್ತಿತ್ತು. ಇದೀಗ ಪರ್ಸಂಟೇಜ್ ವ್ಯವಸ್ಥೆಯಲ್ಲಿ ಆ ಮೊತ್ತ ಬಾಡಿಗೆಗಿಂಥ ದೊಡ್ಡದಾಗುತ್ತದೆ.
ದೊಡ್ಡ ಸ್ಟಾರ್ಗಳ ಸಿನಿಮಾಗಳ ಲೆಕ್ಕದಲ್ಲಿ ಹೇಳುವುದಾದ್ರೆ ಮಾಮೂಲಿ ಬಾಡಿಗೆಗಿಂಥ ದುಪ್ಪಟ್ಟು ಹಣವನ್ನು ಚಿತ್ರಮಂದಿರದವರಿಗೆ ಬಿಟ್ಟು ಕೊಡಬೇಕಾಗುತ್ತದೆ. ಇದರಿಂದಾಗಿ ನಿರ್ಮಾಪಕರ ಲಾಭ ಬಹಳಷ್ಟು ಕಡಿಮೆಯಾಗಲಿದೆ. ಇದೇ ಕಾರಣಕ್ಕೆ ನಿರ್ಮಾಪಕರೆಲ್ಲರೂ ಗಾಬರಿಯಿಂದ ಸಭೆ ಮಾಡಿದರು ಎಂದು ಹೇಳಲಾಗುತ್ತಿದೆ.
ಈ ವಿಷಯವಾಗಿ ದೊಡ್ಡ ನಿರ್ಮಾಪಕರೆಲ್ಲ ಚಿತ್ರಮಂದಿರದವರ ಜೊತೆಗೆ ಮಾತನಾಡಿದ್ದಾರೆ. ಸಮಸ್ಯೆಯ ಬಗ್ಗೆ ಚರ್ಚೆ ನಡೆಸಿದ್ದಾರೆ. ಆದರೆ, ಚಿತ್ರಮಂದಿರದವರು ಇದನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ.
ನಿಮಾರ್ಪಕರ ಬೆದರಿಕೆಗೆ ಕ್ಯಾರೆ ಎನ್ನುತ್ತಿಲ್ಲ ಚಿತ್ರಮಂದಿ ಮಾಲೀಕರು :ಬಿಗ್ ಬಜೆಟ್ ಚಿತ್ರಗಳನ್ನು ಬಾಡಿಗೆ ವ್ಯವಸ್ಥೆಯಡಿ ಚಿತ್ರಮಂದಿರದಲ್ಲಿ ಬಿಡುಗಡೆ ಮಾಡದಿದ್ದರೆ ತಮ್ಮ ಚಿತ್ರಗಳನ್ನು ಓಟಿಟಿಗಳಲ್ಲಿ ಬಿಡುಗಡೆ ಮಾಡುವ ಕುರಿತು ಸಿನಿಮಾ ನಿರ್ಮಾಪಕರ ಸಭೆಯಲ್ಲಿ ಚರ್ಚೆಯಾಗಿದೆ.
ಸಭೆಯಲ್ಲಿ ಇಂಥದ್ದೊಂದು ಚರ್ಚೆ ಆಗಿಯೇ ಇಲ್ಲ ಎಂದು ಕೆಲವು ನಿರ್ಮಾಪಕರು ಹೇಳುತ್ತಾರಾದ್ರೂ, ಇದೇ ವಿಷಯ ಪ್ರಮುಖವಾಗಿ ಚರ್ಚೆಯಾಗಿದೆ ಎಂದು ಹೆಸರು ಹೇಳಲು ಇಚ್ಛಿಸದ ಇನ್ನಿತರ ನಿರ್ಮಾಪಕರು ಹೇಳುತ್ತಾರೆ.
ಓದಿ: ಮಾಸ್ಟರ್, RRR ದಾಖಲೆ ಧೂಳೀಪಟ: ಯೂಟ್ಯೂಬ್ನಲ್ಲಿ KGF-2 ರಾಕಿಭಾಯ್ ಹವಾ
ಚರ್ಚೆ ಆಗಿದೆಯೋ, ಬಿಟ್ಟಿದೆಯೋ ನಂತರದ ಮಾತು. ಆದರೆ, ಈ ಬಗ್ಗೆ ಯಾವ ಚಿತ್ರಮಂದಿರದವರು ಸಹ ಹೆಚ್ಚಾಗಿ ತಲೆಕೆಡಿಸಿಕೊಂಡಿಲ್ಲ. ತಮಿಳುನಾಡಿನಲ್ಲಿ ಕಳೆದ ವರ್ಷ ಕೆಲವು ದೊಡ್ಡ ಬಜೆಟ್ನ ಚಿತ್ರಗಳು ನೇರವಾಗಿ ಓಟಿಟಿಗಳಲ್ಲಿ ಬಿಡುಗಡೆ ಮಾಡುವ ಪ್ರಸ್ತಾಪವಾದಾಗ, ಹಲವು ಚಿತ್ರಮಂದಿರಗಳ ಮಾಲೀಕರು ಇದರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.
ಚಿತ್ರಮಂದಿರಗಳು ಹೆಚ್ಚಾಗಿ ಸ್ಟಾರ್ ಸಿನಿಮಾಗಳನ್ನೇ ನಂಬಿರುತ್ತಾರೆ. ಆದರೆ, ಸ್ಟಾರ್ ಚಿತ್ರಗಳೇ ಚಿತ್ರಮಂದಿರಗಳನ್ನು ಬಿಟ್ಟು ಓಟಿಟಿಯಲ್ಲಿ ಬಿಡುಗಡೆ ಮಾಡಿದ್ರೆ ಇದರಿಂದ ಚಿತ್ರಮಂದಿರಗಳ ಗತಿ ಏನು ಎಂದು ಪ್ರಶ್ನಿಸಿದ್ದರು. ಅದಕ್ಕೆ ಸರಿಯಾಗಿ ಸೂರ್ಯ ಒಬ್ಬರನ್ನು ಹೊರತುಪಡಿಸಿದ್ರೆ, ಮಿಕ್ಕ ಯಾವ ಸ್ಟಾರ್ ಸಹ ಓಟಿಟಿಯಲ್ಲಿ ತಮ್ಮ ಚಿತ್ರ ಬಿಡುಗಡೆ ಮಾಡುವುದಕ್ಕೆ ಆಸಕ್ತಿ ತೋರಿಸಿಲ್ಲ.
ಆದರೆ, ಕನಾರ್ಟಕದಲ್ಲಿ ಇದಕ್ಕೆ ವ್ಯತಿರಿಕ್ತವಾದ ವಾತಾವರಣವಿದೆ. ನಿರ್ಮಾಪಕರು ಓಟಿಟಿಯ ಪ್ರಸ್ತಾಪ ಮಾಡುತ್ತಿದ್ದರೂ ಯಾವ ಚಿತ್ರಮಂದಿರದವರು ಸಹ ಇದರ ಬಗ್ಗೆ ವಿರೋಧ ವ್ಯಕ್ತಪಡಿಸಿಲ್ಲ. ಯಾರೂ ಸಹ ಚಿತ್ರಮಂದಿರವಲ್ಲದೆ ಬೇರೆ ಮಾಧ್ಯಮಗಳ ಮೂಲಕ ಚಿತ್ರ ಬಿಡುಗಡೆ ಮಾಡಬಾರದು ಎಂದು ಹೇಳಿಲ್ಲ.
ಕರ್ನಾಟಕ ಚಲನಚಿತ್ರ ಪ್ರದರ್ಶಕರ ಸಂಘದ ಅಧ್ಯಕ್ಷ ಕೆ ವಿ ಚಂದ್ರಶೇಖರ್ ಮಾತನಾಡಿ, ನಿರ್ಮಾಪಕರು ತಮ್ಮ ಚಿತ್ರಗಳನ್ನು ಎಲ್ಲಿ ಬೇಕಾದ್ರೂ ಬಿಡುಗಡೆ ಮಾಡುವುದಕ್ಕೆ ಸ್ವತಂತ್ರರು ಮತ್ತು ಆ ವಿಷಯವನ್ನು ಯಾರೂ ಕೇಳುವಂತಿಲ್ಲ ಎಂದು ಹೇಳಿದ್ದಾರೆ. ಇನ್ನು, ಕರ್ನಾಟಕ ಚಲನಚಿತ್ರ ಪ್ರದರ್ಶಕರ ಮಹಾಮಂಡಲದ ಅಧ್ಯಕ್ಷ ಓದುಗೌಡರ್ ಸಹ ಇದೇ ರೀತಿಯ ಮಾತುಗಳನ್ನಾಡಿದ್ದಾರೆ.