ಕರ್ನಾಟಕ

karnataka

By

Published : Nov 1, 2019, 3:12 PM IST

ETV Bharat / sitara

ಅನ್ಯಾಯದ ವಿರುದ್ಧ ಹೋರಾಡಿ ಗೆಲ್ಲುವ 'ರಂಗನಾಯಕಿ' ಮೆಚ್ಚಿದ ಪ್ರೇಕ್ಷಕ

ಅದಿತಿ ಪ್ರಭುದೇವ

'ಈಸಬೇಕು ಇದ್ದು ಜಯಿಸಬೇಕು' ಎನ್ನುತ್ತದೆ ದಾಸವಾಣಿ. ಆದರೆ, ಈಗಿನ ಪ್ರಪಂಚದಲ್ಲಿ ಜಯಿಸುವುದು ಅಷ್ಟೊಂದು ಸುಲಭದ ಮಾತಲ್ಲ. ಅದರಲ್ಲೂ ಅತ್ಯಾಚಾರಕ್ಕೆ ಒಳಗಾದ ಒಂದು ಹೆಣ್ಣು ಮಗಳು ಸಮಾಜವನ್ನು ಎದುರಿಸಿ, ಬದುಕಿ, ಜಯ ಗಳಿಸುವುದು ಕಷ್ಟದ ಮಾತು. ನೈಜ ಘಟನೆಯೊಂದರ ಸ್ಫೂರ್ತಿಯಿಂದ ತಯಾರಾದ ‘ರಂಗನಾಯಕಿ’ ಚಿತ್ರದಲ್ಲಿ ಅತ್ಯಾಚಾರಕ್ಕೆ ಗುರಿಯಾದ ನಾಯಕಿ ಸಮಾಜವನ್ನು ಎದುರಿಸಿ ನಿಲ್ಲುವ ಅಂಶಗಳನ್ನು ತೋರಿಸಲಾಗಿದೆ.

ಶ್ರೀನಿವಾಸ್, ಅದಿತಿ ಪ್ರಭುದೇವ

ಚಿತ್ರದಲ್ಲಿನ ಕೆಲವೊಂದು ಪ್ರಮುಖ ಅಂಶಗಳಲ್ಲಿ ದಯಾಳ್ ಪದ್ಮನಾಭನ್ ನಿಜಕ್ಕೂ ಜಾಣ್ಮೆ ಪ್ರದರ್ಶಿಸಿದ್ದಾರೆ. ಚಿತ್ರದ ಮೊದಲಾರ್ಧ ಕುಂಟುತ್ತಾ ಸಾಗುತ್ತಿದೆ ಎನಿಸಿದರೂ, ದ್ವಿತೀಯಾರ್ಧದಲ್ಲಿ ಬೆಚ್ಚಿ ಬೀಳಿಸುವ ಘಟನೆಗಳು, ಕೆಲವು ಅನಿರೀಕ್ಷಿತ ಘಟನೆಗಳ ದೃಶ್ಯಗಳು ಪ್ರೇಕ್ಷಕರನ್ನು ಕುರ್ಚಿ ತುದಿಗೆ ತಂದು ಕೂರಿಸುತ್ತದೆ. ಚುರುಕಿನಿಂದ, ಯಾವಾಗಲೂ ಚಟುವಟಿಕೆಯಿಂದ ಇರುವ ಅಪಾರ್ಟ್​ಮೆಂಟ್​ನಲ್ಲಿ ವಾಸಿಸುವ 'ರಂಗನಾಯಕಿ' (ಅದಿತಿ ಪ್ರಭುದೇವ) ಎಂಬ ಹುಡುಗಿಯೊಬ್ಬಳ ಕಥೆ ಇದು. ಪಕ್ಕದ ಅಪಾರ್ಟ್​ಮೆಂಟ್​​​ನಲ್ಲಿ ವಾಸಿಸುವ ನಾಲ್ವರು ಯುವಕರು ಕೂಡಾ ಆ ಹುಡುಗಿಯನ್ನು ಸಿಸ್ಟರ್ ಎಂದು ಕರೆದೇ ಮಾತನಾಡಿಸುತ್ತಾರೆ. ಸಂಗೀತ ಶಿಕ್ಷಕಿಯಾಗಿ ಕೆಲಸ ಮಾಡುವ ನಾಯಕಿಯನ್ನು ಮಾಧವ ಎಂಬಾತ ಇಷ್ಟಪಟ್ಟು ಆಕೆ ಒಪ್ಪಿಗೆ ಪಡೆದು ಮದುವೆಯಾಗಲು ನಿಶ್ಚಯಿಸುತ್ತಾನೆ.

ಅದಿತಿ ಪ್ರಭುದೇವ

ಎಲ್ಲ ಸುಖಮಯವಾಗಿದೆ ಅಂದುಕೊಳ್ಳುವಷ್ಟರಲ್ಲಿ ರಂಗನಾಯಕಿಯನ್ನು ಒಮ್ಮೆ ನಾಲ್ವರು ಹುಡುಗರು ಪಾರ್ಟಿಗೆ ಆಹ್ವಾನಿಸುತ್ತಾರೆ. ಆದರೆ, ಅಲ್ಲಿ ಮತ್ತು ಬೆರೆಸಿದ ಜ್ಯೂಸ್ ಕುಡಿದು ಆ ನಾಲ್ವರಿಂದ ಆಕೆ ಅತ್ಯಾಚಾರಕ್ಕೆ ಒಳಗಾಗುತ್ತಾಳೆ. ನಂತರ 'ರಂಗನಾಯಕಿ' ಹೇಗೆ ಪೊಲೀಸರ ಮೊರೆ ಹೋಗುತ್ತಾಳೆ. ಆಕೆಗೆ ನ್ಯಾಯ ದೊರೆಯುವುದೇ...? ಆ ನಾಲ್ವರು ಯುವಕರಿಗೆ ಶಿಕ್ಷೆ ಆಗುವುದೇ..? ಮದುವೆ ನಿಶ್ಚಯವಾದ ಹುಡುಗನೊಂದಿಗೆ ರಂಗನಾಯಕಿ ಮದುವೆಯಾಗುವುದೇ..? ಇವೆಲ್ಲ ವಿಷಯ ತಿಳಿಯಲು ನೀವು ಸಿನಿಮಾ ನೋಡಬೇಕು.

ತ್ರಿವಿಕ್ರಮ್ ಜೊತೆ ಅದಿತಿ

ಇನ್ನು ಚಿತ್ರದಲ್ಲಿ 'ರಂಗನಾಯಕಿ' ಆಗಿ ಅದಿತಿ ಪ್ರಭುದೇವ ಪಕ್ವವಾದ ಅಭಿನಯ ನೀಡಿದ್ದಾರೆ. ಅವರ ಅಭಿನಯಕ್ಕೆ ಪ್ರಶಸ್ತಿ ಬಂದರೂ ಆಶ್ಚರ್ಯ ಪಡಬೇಕಿಲ್ಲ. ಇದು ಅದಿತಿ ವೃತ್ತಿ ಜೀವನದ ಬಹಳ ಚಾಲೆಂಜಿಂಗ್ ಹಾಗೂ ಬೆಸ್ಟ್​ ಪಾತ್ರ ಎನ್ನುವುದರಲ್ಲಿ ಸಂದೇಹವೇ ಇಲ್ಲ. ಶ್ರೀನಿವಾಸ್ (ಕೃಷ್ಣಮೂರ್ತಿ) ಹಾಗೂ ತ್ರಿವಿಕ್ರಮ್ (ಮಾಧವ) ನಟನೆ ಕೂಡಾ ಚೆನ್ನಾಗಿದೆ. ಪೊಲೀಸ್ ಅಧಿಕಾರಿಯಾಗಿ ಚಂದ್ರಚೂಡ್, ನ್ಯಾಯಾಧೀಶರಾಗಿ ಸುಚೇಂದ್ರ ಪ್ರಸಾದ್ ತೂಕದ ಅಭಿನಯ ನೀಡಿದ್ದಾರೆ. ಖದ್ರಿ ಮಣಿಕಾಂತ್ ಅವರ ಸಂಗೀತದಲ್ಲಿ ಹಳೆಯ ಶಾಸ್ತ್ರೀಯ ಗೀತೆಗಳು ಬಹಳ ಮಾಧುರ್ಯವಾಗಿ ಮೂಡಿ ಬಂದಿದೆ. ಛಾಯಾಗ್ರಾಹಕ ರಾಕೇಶ್ ಚಾಕಚಕ್ಯತೆಯನ್ನು ಭೇಷ್ ಎನ್ನಲೇಬೇಕು. ನವೀನ್ ಕೃಷ್ಣ ಅವರ ಸಂಭಾಷಣೆಯಲ್ಲಿ ಜವಾಬ್ದಾರಿಯುತ ಮಾತುಗಳು ಅಡಕವಾಗಿದೆ. ಒಟ್ಟಿನಲ್ಲಿ 'ರಂಗನಾಯಕಿ' ಒಮ್ಮೆ ಎಲ್ಲರೂ ನೋಡಲೇಬೇಕಾದಂತ ಸಿನಿಮಾ.

ABOUT THE AUTHOR

...view details