ದಿನೇಶ್ ಬಾಬು ಸಿನಿಮಾ ಎಂದರೆ ಸಿನಿಪ್ರಿಯರು ಆ ಸಿನಿಮಾ ನೋಡಲು ಕಾತರದಿಂದ ಕಾಯುತ್ತಿರುತ್ತಾರೆ. ಅದರಲ್ಲೂ ಇಡೀ ಕುಟುಂಬವೇ ಥಿಯೇಟರ್ಗೆ ಹೋಗಿ ಜೊತೆಯಲ್ಲಿ ಕುಳಿತು ಸಿನಿಮಾ ನೋಡುತ್ತಾರೆ. ದಿನೇಶ್ ಬಾಬು ನಿರ್ದೇಶನದ ಹೊಸ ಸಿನಿಮಾ 'ಹಗಲು ಕನಸು' ಇಂದು ಬಿಡುಗಡೆಯಾಗಿದೆ. ಮಾಸ್ಟರ್ ಆನಂದ್ ಈ ಸಿನಿಮಾದಲ್ಲಿ ಪೂರ್ಣ ಪ್ರಮಾಣದ ನಾಯಕನಾಗಿ ನಟಿಸಿದ್ದಾರೆ. 'ಹಗಲು ಕನಸು' ಚಿತ್ರದಲ್ಲಿ ಒಂದು ಸಹಜವಾದ ಕನಸು ಹಾಗೂ ಮತ್ತೊಂದು ಸೇಡಿನ ಕನಸು. ಇವೆರಡೂ ಈ ಚಿತ್ರದ ಹೈಲೈಟ್ ಎನ್ನಬಹುದು.
ಕನಸಿಗೂ ನನಸಿಗೂ ಸೇಡಿನ ಲೇಪನ ಈ 'ಹಗಲು ಕನಸು'
ದಿನೇಶ್ ಬಾಬು ಅವರು ಕ್ಯಾಮರಾ ಕಣ್ಣಿನಿಂದ ಹೇಗೆ ಎಲ್ಲವನ್ನೂ ಅಂದವಾಗಿ ಕಾಣುವಂತೆ ಮಾಡುತ್ತಾರೋ ಅದೇ ರೀತಿ ಅವರು ಆಯ್ಕೆ ಮಾಡಿಕೊಳ್ಳುವ ಪಾತ್ರಗಳು ಕೂಡಾ ಚೊಕ್ಕವಾಗಿರುತ್ತವೆ. ಇನ್ನು, ಈ ಚಿತ್ರದ ಪಾತ್ರ ಆನಂದ್ ಅವರ ಇಮೇಜ್ಗೆ ತಕ್ಕಂತಿದೆ. ಸಿನಿಮಾ ನಿರೂಪಣಾ ಶೈಲಿ ಕೂಡಾ ಬಹಳ ಚೆನ್ನಾಗಿದೆ. ಇಬ್ಬರು ಹೆಣ್ಣುಮಕ್ಕಳು ಹಾಗೂ ಓರ್ವ ಮಗ ಇರುವ ಕುಟುಂಬಕ್ಕೆ ನಾಯಕಿ ಬಿರುಗಾಳಿಯಂತೆ ಬರುತ್ತಾಳೆ. ನಾಯಕ ವಿಕ್ರಿಗೆ (ಮಾಸ್ಟರ್ ಆನಂದ್) ಮಚ್ಚೆ ಇರುವ ಹುಡುಗಿ ಆಗ್ಗಾಗ್ಗೆ ಕನಸಿನಲ್ಲಿ ಬರುತ್ತಿರುತ್ತಾಳೆ. ಅದರೆ ಕನಸಿನಲ್ಲಿ ಕಾಣುವ ಹುಡುಗಿ ತೇಜಸ್ವಿನಿ (ಸನಿಹ ಯಾದವ್) ನಿಜವಾಗಿಯೂ ಆನಂದ್ ಮನೆಗೆ ಬರುತ್ತಾಳೆ. ಆಕೆ ಕೂಡಾ ಕನಸೊಂದನ್ನು ಹೊತ್ತು ನಾಯಕನ ಮನೆಗೆ ಬರುತ್ತಾಳೆ. ಮನೆಯವರ ಭಾವನೆಗಳೊಂದಿಗೆ ಆಟ ಆಡಲು ಆರಂಭಿಸುತ್ತಾಳೆ. ಮನೆಯವರನ್ನು ಹಣಕ್ಕಾಗಿ ಬ್ಲಾಕ್ಮೇಲ್ ಮಾಡುತ್ತಾಳೆ. ಆಕೆ ಏಕೆ ಹೀಗೆಲ್ಲಾ ಮಾಡುತ್ತಾಳೆ. ನಾಯಕನ ಮನೆಗೆ ಅವಳು ಬರಲು ಕಾರಣವೇನು ಎಂಬುದನ್ನು ನೀವು ತೆರೆ ಮೇಲೆಯೇ ನೋಡಬೇಕು.
ಮಾಸ್ಟರ್ ಆನಂದ್ ನಾಯಕ ಆಗಿ ಸಂಭಾಷಣೆ ಒಪ್ಪಿಸುವಲ್ಲಿ ಗೆದ್ದಿದ್ದಾರೆ. ನಾಯಕಿ ಆಗಿ ಸನಿಹ ಯಾದವ್ ಬಹಳ ಇಷ್ಟ ಆಗಲು ಕಾರಣ ಆ ಪಾತ್ರಕ್ಕೆ ಇರುವ ಗತ್ತು. ವಾಣಿಶ್ರೀ, ನೀನಾಸಂ ಅಶ್ವಥ್, ಅಶ್ವಿನಿ ಹಾಸನ್, ಚಿತ್ಕಲಾ, ಮನ್ದೀಪ್ ರೈ ಅಭಿನಯ ಪೂರಕವಾಗಿದೆ. ಕಾರ್ತಿಕ್ ವೆಂಕಟೇಶ್ ಅವರ ಎರಡು ಹಾಡುಗಳು ರಾಗದಲ್ಲಿ ಸಮೃದ್ಧವಾಗಿವೆ. ಸಾರಂಗಿ...ಹಾಡು ಬಹಳ ಕಾಲ ನೆನಪಿನಲ್ಲಿ ಉಳಿಯುತ್ತದೆ. ದಿನೇಶ್ ಬಾಬು ಅವರ ಕ್ಯಾಮರಾ ಕೈಚಳಕ ಕಣ್ಣಿಗೆ ಹಬ್ಬದಂತಿದೆ. ಸಿನಿಮಾ ನೋಡಲು ಅಡ್ಡಿಯಿಲ್ಲ.