ಯುವರತ್ನ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಬಹು ನಿರೀಕ್ಷಿತ ಚಿತ್ರ. ಸದ್ಯ ಯುವರತ್ನ ಚಿತ್ರದ ಮೂರನೇ ಹಾಡು ಪಾಠಶಾಲಾ ರಿಲೀಸ್ ಆಗಿದ್ದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸೌಂಡ್ ಮಾಡುತ್ತಿದೆ.
ಕಾಲೇಜು ದಿನಗಳ ಬ್ಯಾಕ್ ಡ್ರಾಪ್ನಲ್ಲಿ ಬರುವ ಈ ಹಾಡು ಯುವಕರ ಗಮನ ಸೆಳೆಯುತ್ತಿದ್ದು, ಹಾಡಿನಲ್ಲಿ ದೇಶದ ದಿಗ್ಗಜರು ಕಾಣಿಸಿಕೊಂಡಿದ್ದಾರೆ. ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್, ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು, ಡಾ.ರಾಜ್ ಕುಮಾರ್, ವಿಷ್ಣುವರ್ಧನ್, ಸ್ವಾಮಿ ವಿವೇಕಾನಂದ ಮತ್ತು ರಾಮಕೃಷ್ಣ ಪರಮಹಂಸ, ಉಪೇಂದ್ರ, ಕಾಶಿನಾಥ್, ಹಂಸಲೇಖ ಮತ್ತು ವಿ.ಮನೋಹರ್ ಸೇರಿದಂತೆ ಖ್ಯಾತನಾಮರ ಫೋಟೋಗಳು ಹಾಡಿನಲ್ಲಿ ಬರುತ್ತವೆ.
ಪಾಠಶಾಲಾ ಹಾಡಿಗೆ ನಿರ್ದೇಶಕ ಸಂತೋಷ್ ಆನಂದ್ ರಾಮ್ ಸಾಹಿತ್ಯ ರಚಿಸಿದ್ದು, ಗಾಯಕ ವಿಜಯ್ ಪ್ರಕಾಶ್ ಧ್ವನಿ ನೀಡಿದ್ದಾರೆ. ತೆಲುಗಿನ ಸಂಗೀತ ನಿರ್ದೇಶಕ ಎಸ್.ತಮನ್ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಮುಂದೆ ಗುರಿ ಇರಬೇಕು ಹಿಂದೆ ಗುರು ಇರಬೇಕು ಎನ್ನುವ ಸಾಲುಗಳು ಪಾಠಶಾಲಾ ಹಾಡಿನಲ್ಲಿ ಕೂಡಿದೆ. ಪವರ್ ಸ್ಟಾರ್ ಹಾಗೂ ನಿರ್ದೇಶಕ ಸಂತೋಷ್ ಆನಂದ್ ರಾಮ್ ಕಾಂಬಿನೇಶನ್ನಲ್ಲಿ ಮೂಡಿ ಬರುತ್ತಿರುವ ಎರಡನೇ ಚಿತ್ರ ಇದಾಗಿದೆ. ಪುನೀತ್ ರಾಜ್ ಕುಮಾರ್ ಜೊತೆ ಸಯ್ಯೇಶಾ, ಪ್ರಕಾಶ್ ರೈ, ಧನಂಜಯ್, ಸೋನುಗೌಡ, ದಿಗಂತ್, ಹೀಗೆ ಸಾಕಷ್ಟು ಕಲಾವಿದರು ಅಭಿನಯಿಸಿದ್ದಾರೆ.
ಚಿತ್ರವನ್ನು ಹೊಂಬಾಳೆ ಫಿಲಂಸ್ ಅದ್ಧೂರಿಯಾಗಿ ನಿರ್ಮಾಣ ಮಾಡಿದ್ದು, ಈಗಾಗಲೇ ರಿಲೀಸ್ ಆಗಿರುವ ಹಾಡುಗಳು, ಪೋಸ್ಟರ್ಗಳು ಹಾಗೂ ಟೀಸರ್ ಅಭಿಮಾನಿಗಳ ತುಂಬಾ ಇಷ್ಟ ಆಗಿದ್ದು, ಏ.1ರಂದು ಯುವರತ್ನ ಸಿನಿಮಾ ಕನ್ನಡ, ತೆಲುಗು ಭಾಷೆಯಲ್ಲಿ ಬಿಡುಗಡೆ ಆಗಲಿದೆ.