ಬಿಗ್ ಬಜೆಟ್ ಚಿತ್ರಗಳ ಪೈಕಿ ಧ್ರುವ ಸರ್ಜಾ ಅಭಿನಯದ 'ಪೊಗರು' ಮತ್ತು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ರಾಬರ್ಟ್' ಸಿನಿಮಾ ಬಿಡುಗಡೆಯಾಗಿದೆ. ಆದರೆ, ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ 'ಯುವರತ್ನ' ಸಿನಿಮಾ ಈ ಎರಡೂ ಚಿತ್ರಗಳಂತೆ ಸುಸೂತ್ರವಾಗಿ ಬಿಡುಗಡೆಯಾಗುತ್ತದೆಯೇ? ಎಂಬ ಪ್ರಶ್ನೆ ಎಲ್ಲರಲ್ಲೂ ಕಾಡುತ್ತಿದೆ. ಇದೀಗ ಆ ಗೊಂದಲಕ್ಕೆ ತೆರೆ ಬಿದ್ದಿದ್ದು, ಯುವರತ್ನ ಚಿತ್ರ ಬಿಡುಗಡೆಗೆ ಯಾವುದೇ ಅಡ್ಡಿ ಆತಂಕಗಳಿಲ್ಲದೇ ರಾಜ್ಯಾದ್ಯಂತ ಏಪ್ರಿಲ್ 1ರಂದು ಬಿಡುಗಡೆಯಾಗುವುದಕ್ಕೆ ಸಿದ್ಧತೆ ನಡೆಸಿದೆ.
ರಾಜ್ಯದಲ್ಲಿ ಕೊರೊನಾ ಎರಡನೇ ಅಲೆ ಪ್ರಾರಂಭವಾಗಿದೆ. ಅದನ್ನು ತಡೆಗಟ್ಟಲು ಸರ್ಕಾರ ಹಲವು ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತರುತ್ತಿದ್ದು, ಈ ಪೈಕಿ ಲಾಕ್‍ಡೌನ್ ಅಥವಾ ಶೇ. 50ರಷ್ಟು ಹಾಜರಾತಿ ಘೋಷಿಸಬಹುದು ಎಂಬ ಭಯ ಎಲ್ಲರಲ್ಲೂ ಇತ್ತು. ಸೋಮವಾರ ಸಂಜೆ ಈ ವಿಷಯವಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ಸಭೆ ಸೇರಲಾಗಿದ್ದು, ಈ ಸಭೆಯಲ್ಲಿ ಲಾಕ್‍ಡೌನ್ ಆಗಲಿ, ಶೇ. 50ರಷ್ಟು ಹಾಜರಾತಿಗೆ ಅನುಮತಿ ನೀಡಬೇಕೆಂಬ ಚರ್ಚೆ ಎಲ್ಲೂ ಆಗಿಲ್ಲ. ಅದರ ಬದಲಿಗೆ, ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಮತ್ತು ಚಿತ್ರಮಂದಿರಗಳಲ್ಲಿ ಶುಚಿತ್ರ ಕಾಪಾಡಬೇಕು ಎಂಬ ಕೆಲವು ತೀರ್ಮಾನಗಳನ್ನು ತೆಗೆದುಕೊಳ್ಳಲಾಗಿದೆ.