ಕರ್ನಾಟಕ

karnataka

ETV Bharat / sitara

'ತೋತಾಪುರಿ' ಸಿನಿಮಾ ತಡವಾಗುತ್ತಿರುವುದಕ್ಕೆ ಜಗ್ಗೇಶ್ ನೀಡಿದ ಕಾರಣ ಏನು..?

'ತೋತಾಪುರಿ ' ಸಿನಿಮಾ ಚಿತ್ರೀಕರಣ ಆರಂಭವಾಗಿ ಎರಡು ವರ್ಷಗಳು ತುಂಬಿವೆ. ಸಿನಿಮಾ ಕೂಡಾ ಬಹಳ ಅದ್ಭುತವಾಗಿ ಮೂಡಿಬಂದಿದೆ. ಆದರೆ ಚಿತ್ರ ಬಿಡುಗಡೆ ಯಾವಾಗ ಎಂಬ ವಿಚಾರ ಮಾತ್ರ ನನಗೆ ಗೊತ್ತಿಲ್ಲ. ಸಿನಿಮಾ ಬಿಡುಗಡೆ ಮಾಡಿದರೆ ತಾನೇ ಅದು ಹೇಗಿದೆ ಎಂದು ಜನರಿಗೆ ತಿಳಿಯುವುದು. ಬುಟ್ಟಿಯಲ್ಲಿ ಹಾವನ್ನು ಇಟ್ಟುಕೊಂಡರೆ ಏನು ಪ್ರಯೋಜನ ಎಂದು ಜಗ್ಗೇಶ್ ಚಿತ್ರ ಬಿಡುಗಡೆ ತಡವಾಗುತ್ತಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ್ದಾರೆ.

Tothapuri movie getting delayed
'ತೋತಾಪುರಿ'

By

Published : Nov 25, 2020, 11:23 AM IST

ಜಗ್ಗೇಶ್ ಅಭಿನಯದ 'ತೋತಾಪುರಿ' ಸಿನಿಮಾ ಪ್ರಾರಂಭವಾಗಿ ಎರಡು ವರ್ಷಗಳೇ ಕಳೆದಿವೆ. ಈ ಸಿನಿಮಾ ಇದುವರೆಗೂ ಬಿಡುಗಡೆಯ ಸುದ್ದಿಯೇ ಇಲ್ಲ. ಒಂದು ಚಿತ್ರ ಎಂದು ಪ್ರಾರಂಭವಾಗಿದ್ದು, ಈಗ ಎರಡು ಚಿತ್ರಗಳಾಗಿವೆ. ಕಳೆದ ವರ್ಷವೇ ಮುಗಿಯಬೇಕಿದ್ದ ಚಿತ್ರೀಕರಣ, ಇನ್ನೂ ಸಾಕಷ್ಟು ಬಾಕಿ ಇದೆ. ಹೀಗಿರುವಾಗ ಚಿತ್ರ ಮುಗಿಯುವುದು ಯಾವಾಗ ಮತ್ತು ಬಿಡುಗಡೆ ಯಾವಾಗ ಎಂದು ಜಗ್ಗೇಶ್ ಅವರನ್ನು ಕೇಳಿದರೆ ಆ ದೇವರಿಗೇ ಗೊತ್ತು ಎಂದು ಮೇಲೆ ತೋರಿಸುತ್ತಾರೆ ಜಗ್ಗೇಶ್.

ಜಗ್ಗೇಶ್ ಹೇಳುವಂತೆ 'ತೋತಾಪುರಿ ' ಚಿತ್ರಕ್ಕೆ ಇದುವರೆಗೂ 145 ದಿನಗಳ ಕಾಲ ಚಿತ್ರೀಕರಣ ಮಾಡಲಾಗಿದೆಯಂತೆ. ಇನ್ನೂ 45 ದಿನಗಳ ಚಿತ್ರೀಕರಣ ಬಾಕಿ ಇದೆ . ಇನ್ನು ಚಿತ್ರದ ಬಜೆಟ್ 16 ಕೋಟಿಗೆ ಏರಿದೆಯಂತೆ. ಬಾಕಿ ಚಿತ್ರೀಕರಣ ಯಾವಾಗ ಶುರು..? ಯಾವಾಗ ಬಿಡುಗಡೆ ಯಾವುದೂ ಗೊತ್ತಿಲ್ಲವಂತೆ. ಕಳೆದ ಎರಡು ವರ್ಷಗಳಿಂದ ಚಿತ್ರೀಕರಣ ಮಾಡುತ್ತಿದ್ದಾರೆ. ಯಾವಾಗ ಕರೆದರೂ ಹೋಗಿ ಚಿತ್ರೀಕರಣದಲ್ಲಿ ಭಾಗವಹಿಸಲು ನಾನು ರೆಡಿ. ಆದರೆ ಸಿನಿಮಾ ಬಿಡುಗಡೆ ಯಾವಾಗ ಎಂಬ ವಿಚಾರ ಮಾತ್ರ ನನಗೆ ಗೊತ್ತಿಲ್ಲ ಎನ್ನುತ್ತಾರೆ ಜಗ್ಗೇಶ್.

'ತೋತಾಪುರಿ ' ಚಿತ್ರ ತಡವಾಗುತ್ತಿರುವುದಕ್ಕೆ ನಿರ್ದೇಶಕ ವಿಜಯ್ ಪ್ರಸಾದ್ ಈ ಚಿತ್ರವನ್ನು ಪಕ್ಕಕ್ಕೆ ಇಟ್ಟು 'ಪೆಟ್ರೋಮ್ಯಾಕ್ಸ್ ' ಚಿತ್ರವನ್ನು ಕೈಗೆತ್ತಿಕೊಂಡಿರುವುದೇ ಕಾರಣ. ಇದೇ ವಿಚಾರವನ್ನು ಮಾತನಾಡಿರುವ ಜಗ್ಗೇಶ್ ಒಂದು ಸಿನಿಮಾ ಮುಗಿಯುವುದರೊಳಗೆ ಮತ್ತೊಂದು ಚಿತ್ರವನ್ನು ಕೈಗೆತ್ತಿಕೊಂಡರೆ ಚಿತ್ರ ತಡವಾಗದೆ ಮತ್ತೇನು...? ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಈಗಾಗಲೇ ಮೊದಲ ಭಾಗದ ಡಬ್ಬಿಂಗ್ ಮುಗಿಸಿರುವ ಜಗ್ಗೇಶ್, ಚಿತ್ರ ಅದ್ಭುತವಾಗಿ ಮೂಡಿ ಬಂದಿದೆ ಎನ್ನುತ್ತಾರೆ. ಆದರೆ, ಎಷ್ಟೇ ಚೆನ್ನಾಗಿ ಬಂದರೂ ಪ್ರಯೋಜನವೇನು..?ಬುಟ್ಟಿಯಲ್ಲಿ ಹಾವಿಟ್ಟುಕೊಂಡು ಅದು ಅಷ್ಟು ಉದ್ದ ಇದೆ, ಇಷ್ಟು ಉದ್ದ ಇದೆ ಎಂದರೆ ಯಾರಿಗೆ ತಿಳಿಯುತ್ತದೆ...ಹಾವನ್ನು ಹೊರಗೆ ಬಿಟ್ಟರೆ ತಾನೇ ಅದು ಎಷ್ಟು ಉದ್ದವಿದೆ ಎಂದು ತಿಳಿಯುವುದು ಎಂದು 'ತೋತಾಪುರಿ ' ಚಿತ್ರ ತಡವಾಗುತ್ತಿರುವ ಬಗ್ಗೆ ನಗೆ ಚಟಾಕಿ ಮೂಲಕವೇ ಉತ್ತರ ನೀಡಿದ್ದಾರೆ.

ABOUT THE AUTHOR

...view details