ಇಂದಿಗೆ ವಿಷ್ಣುವರ್ಧನ್ ವಿಧಿವಶರಾಗಿ 10 ವರ್ಷಗಳು ಕಳೆದಿವೆ. ಈ ಹಿನ್ನೆಲೆಯಲ್ಲಿ ಹತ್ತನೇ ವರ್ಷದ ಪುಣ್ಯ ಸ್ಮರಣೆ ಕಾರ್ಯಕ್ರಮವನ್ನು ಬೆಂಗಳೂರಿನ ಅಭಿಮಾನ್ ಸ್ಟುಡಿಯೋದಲ್ಲಿ ಹಮ್ಮಿಕೊಳ್ಳಲಾಗಿತ್ತು. ಇನ್ನು ವಿಷ್ಣುದಾದಾನ ಅಭಿಮಾನಿಗಳಿಂದ ರಕ್ತದಾನ ಕಾರ್ಯಕ್ರಮ ಕೂಡ ಜರುಗಿದೆ.
ಸಾಹಸ ಸಿಂಹನ ಪುಣ್ಯ ಸ್ಮರಣೆಗಾಗಿ ರಾಜ್ಯದ ಹಲವು ಮಂದಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ. ಹಾಗೂ ಸ್ಯಾಂಡಲ್ವುಡ್ ನಟರೂ ಕೂಡ ವಿಷ್ಣು ಸ್ಮರಣೆ ಮಾಡಿದ್ದಾರೆ.
'ರಾಮಾಚಾರಿ'ಯನ್ನು ನೆನೆದ ಚಾಲೆಂಜಿಂಗ್ ಸ್ಟಾರ್ ದರ್ಶನ್, ಮರೆಯಾದರೂ ಮರೆಯಲಾಗದ ಮಾಣಿಕ್ಯ, ಸಾಹಸ ಸಿಂಹ, ಅಭಿನವ ಭಾರ್ಗವ, ವಿಷ್ಣು ದಾದ ಜನರ ಮನದಲ್ಲಿ ಎಂದಿಗೂ ಅಜರಾಮರ.10ನೇ ಪುಣ್ಯ ಸ್ಮರಣೆ ಎಂದು ತಮ್ಮ ಟ್ವಿಟ್ಟರ್ನಲ್ಲಿ ಬರೆದುಕೊಂಡಿದ್ದಾರೆ.
ಇನ್ನು ವಿಷ್ಣವರ್ಧನ್ರ ಬಗ್ಗೆ ಟ್ವೀಟ್ ಮಾಡಿರುವ ಕಿಚ್ಚ ಸುದೀಪ್, ಅಪ್ಪಾಜಿ.. ಇಂದು ನಿಮ್ಮ 10ನೇ ಪುಣ್ಯಸ್ಮರಣೆ! ಆದ್ರೆ ಮರೆತವರಿಗೆ ಮಾತ್ರ ಸ್ಮರಣೆ. ನೀವು ನಮ್ಮೆದೆಯ ನಂದಾದೀಪ. ಈ 10 ವರ್ಷದಲ್ಲಿ ಒಂದೇ ಒಂದು ದಿನವೂ ಈ ನಾಡು, ಚಿತ್ರರಂಗ, ನಿಮ್ಮ ಅಭಿಮಾನಿಗಳು ಮತ್ತು ನಾನು ನಿಮ್ಮನ್ನು ಮರೆತೇ ಇಲ್ಲ. ನಿಮ್ಮ ಹೆಸರು ಅತ್ಯಂತ ಪ್ರಕಾಶಮಾನವಾಗಿ ಬೆಳಗುತ್ತಲೇ ಇದೆ. ಆ ಬೆಳಕು ಎಲ್ಲರಿಗೂ ದಾರಿದೀಪವಾಗಿದೆ ಎಂದು ಬರೆದಿದ್ದಾರೆ.
ನವರಸ ನಾಯಕ ಜಗ್ಗೇಶ್ ಕೂಡ ಈ ಬಗ್ಗೆ ಟ್ವೀಟ್ ಮಾಡಿದ್ದು, ಎಷ್ಟು ಮುದ್ದಾಗಿ ಇದ್ದಾನೆ ಈ ಮನುಷ್ಯ ಎನ್ನುತ್ತಿತ್ತು ನನ್ನಮನ! ಅನೇಕ ಬಾರಿ ಇಬ್ಬರು ಸೇರಿ ಮಾತಾಡಿದ ದಿನವುಂಟು! ನಾವಿಬ್ಬರೂ ಒಂದೆ ರಾಶಿನಕ್ಷತ್ರ "ಜೇಷ್ಟ ವೃಶ್ಚಿಕ!
ಭಾವನಾಜೀವಿ ಏಕಾಂತ ಪ್ರಿಯ,ಆಧ್ಯಾತ್ಮಿಕವಾಗಿ ತನ್ನ ತೊಡಗಿಸಿಕೊಂಡ ಚೇತನ. ಹಾಸ್ಯಪ್ರಿಯ ಆದರೆ ಸ್ವಲ್ಪ ವ್ಯೆತ್ಯಾಸಕಂಡರೆ ಮೌನಿ. ಕರ್ತವ್ಯಮುಗಿಸಿ ಹೋಗಿ 10ವರ್ಷವಾಯಿತು ಓಂಶಾಂತಿ ಎಂದು ಬರೆದಿದ್ದಾರೆ.