ಚೆನ್ನೈ:ಖ್ಯಾತ ತಮಿಳು ನಟ ವಿಜಯ್ ತಂದೆ, ನಿರ್ಮಾಪಕ ಎಸ್.ಎ. ಚಂದ್ರಶೇಖರ್ ವಿಜಯ್ ಹೆಸರಿನಲ್ಲಿ 'ಆಲ್ ಇಂಡಿಯಾ ತಳಪತಿ ವಿಜಯ್ ಮಕ್ಕಳ ಇಯಕ್ಕಂ' ಎಂಬ ರಾಜಕೀಯ ಪಕ್ಷವನ್ನು ಸ್ಥಾಪಿಸಲು ಚುನಾವಣಾ ಆಯೋಗಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಆದರೆ ಈ ರಾಜಕೀಯ ಪಕ್ಷಕ್ಕೂ ನನಗೆ ಯಾವುದೇ ಸಂಬಂಧ ಇಲ್ಲ ಎಂದು ನಟ ವಿಜಯ್ ಸ್ಪಷ್ಟಪಡಿಸಿದ್ದಾರೆ.
ವಿಜಯ್ ರಾಜಕೀಯಕ್ಕೆ ಬರಲಿದ್ದಾರೆ ಎಂಬ ಮಾತು ಬಹಳ ದಿನಗಳಿಂದ ಕೇಳಿಬರುತ್ತಿತ್ತು. ಇದೀಗ ವಿಜಯ್ ತಂದೆ ಪುತ್ರನ ಹೆಸರಿನಲ್ಲಿ ಪಕ್ಷವೊಂದನ್ನು ಸ್ಥಾಪಿಸಲು ಅರ್ಜಿ ಸಲ್ಲಿಸಿದ್ದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ತಂದೆ ಹಾಗೂ ಮಗ ಉದ್ದೇಶಪೂರ್ವಕವಾಗಿಯೇ ರಾಜಕೀಯ ಪಕ್ಷವನ್ನು ಸ್ಥಾಪಿಸುತ್ತಿದ್ದಾರೆ ಎಂಬ ಮಾತು ಕೂಡಾ ಕೇಳಿಬರುತ್ತಿದೆ. ಆದರೆ ವಿಜಯ್ ಇದನ್ನು ನಿರಾಕರಿಸಿದ್ದು ''ನನ್ನ ತಂದೆ ಸ್ಥಾಪಿಸುತ್ತಿರುವ ಈ ರಾಜಕೀಯ ಪಕ್ಷಕ್ಕೂ ನನಗೂ ಯಾವುದೇ ಸಂಬಂಧ ಇಲ್ಲ. ಈ ವಿಚಾರ ನನಗೆ ಮಾಧ್ಯಮಗಳಿಂದಲೇ ತಿಳಿದದ್ದು. ಅಭಿಮಾನಿಗಳು ದಯಮಾಡಿ ಈ ಪಕ್ಷದಿಂದ ದೂರ ಉಳಿಯಬೇಕು. ಇದು ನನ್ನ ರಾಜಕೀಯ ಪಕ್ಷ ಎಂದು ಯಾವ ಅಭಿಮಾನಿಯಾಗಲೀ ಸೇವೆ ಮಾಡುವ ಅಗತ್ಯ ಇಲ್ಲ'' ಎಂದು ಮನವಿ ಮಾಡಿದ್ದಾರೆ.
ವಿಜಯ್ ಹಾಗೂ ಅವರ ತಂದೆ ಬಿಜೆಪಿ ಸೇರಲಿದ್ದಾರೆ ಎಂಬ ಮಾತು ಕೇಳಿಬಂದಿತ್ತು. ಕೆಲವು ದಿನಗಳ ಹಿಂದೆ ಸಂದರ್ಶನವೊಂದರಲ್ಲಿ ಇದಕ್ಕೆ ಪ್ರತಿಕ್ರಿಯಿಸಿದ್ದ ವಿಜಯ್ ತಂದೆ, ''ನಾವು ಬಿಜೆಪಿ ಸೇರುವ ಅಗತ್ಯವಿಲ್ಲ. ನಮಗೆ ಈಗಾಗಲೇ 'ವಿಜಯ್ ಮಕ್ಕಳ್ ಇಯಕ್ಕಂ' ಸಂಸ್ಥೆ ಇದೆ. ಅವಶ್ಯಕತೆ ಇದ್ದಾಗ ವಿಜಯ್ ಅದನ್ನೇ ರಾಜಕೀಯ ಪಕ್ಷವಾಗಿ ಬದಲಾಯಿಸುತ್ತಾರೆ'' ಎಂದು ಹೇಳಿದ್ದರು. ಈ ಬಗ್ಗೆ ಮಾತನಾಡಿರುವ ವಿಜಯ್, ''ನಾನು ಸಮಾಜ ಸೇವೆಗೆಂದು 'ವಿಜಯ್ ಮಕ್ಕಳ್ ಇಯಕ್ಕಂ' ಸಂಸ್ಥೆಯನ್ನು ಸ್ಥಾಪಿಸಿದ್ದೇನೆ. ನಮ್ಮ ಸಂಸ್ಥೆಗಾಗಲೀ ನನ್ನ ತಂದೆ ಸ್ಥಾಪಿಸುತ್ತಿರುವ ರಾಜಕೀಯ ಪಕ್ಷಕ್ಕಾಗಲೀ ಯಾವುದೇ ಸಂಬಂಧ ಇಲ್ಲ. ಒಂದು ವೇಳೆ ನನ್ನ ಹೆಸರನ್ನಾಗಲೀ, ನನ್ನ ಸಂಸ್ಥೆಯ ಹೆಸರನ್ನಾಗಲೀ ದುರುಪಯೋಗ ಮಾಡಿಕೊಂಡಲ್ಲಿ ಈ ಬಗ್ಗೆ ಕಾನೂನು ಕ್ರಮ ಕೈಗೊಳ್ಳಲೂ ಹಿಂಜರಿಯುವುದಿಲ್ಲ'' ಎಂದು ಎಚ್ಚರಿಕೆ ನೀಡಿದ್ದಾರೆ.
ವಿಜಯ್ ತಂದೆ ರಾಜಕೀಯ ಪಕ್ಷ ಸ್ಥಾಪಿಸಲು ಅರ್ಜಿ ಸಲ್ಲಿಸಿದ್ದಾರೆ ಎಂಬ ವಿಚಾರ ತಿಳಿಯುತ್ತಿದ್ದಂತೆ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಚರ್ಚೆ ನಡೆಯುತ್ತಿದೆ. ಈ ಬಗ್ಗೆ ಮಾತನಾಡಿರುವ ವಿಜಯ್ ತಂದೆ ಎಸ್.ಎ. ಚಂದ್ರಶೇಖರ್, ''ವಿಜಯ್ ಫ್ಯಾನ್ಸ್ ಕ್ಲಬ್ ಸ್ಥಾಪಿಸಿದ್ದು ನಾನು, ನಂತರ ಅದನ್ನು 'ವಿಜಯ್ ಮಕ್ಕಳ್ ಇಯಕ್ಕಂ' ಆಗಿ ರೂಪಾಂತರ ಮಾಡಲಾಯ್ತು. ಇದೀಗ ಮತ್ತೆ ಅದನ್ನು ರಾಜಕೀಯ ಪಕ್ಷವಾಗಿ ಪರಿವರ್ತಿಸಲಾಗುತ್ತಿದೆ. ಇದರಲ್ಲಿ ನನ್ನ ಪುತ್ರ ವಿಜಯ ಪಾತ್ರವಿಲ್ಲ. ನಮ್ಮ ಪಕ್ಷಕ್ಕೆ ಸೇರುವುದು, ಬಿಡುವುದು ವಿಜಯ್ ನಿರ್ಧಾರಕ್ಕೆ ಬಿಟ್ಟಿದ್ದೇನೆ. ಇದರಲ್ಲಿ ಯಾವುದೇ ಬಲವಂತವಿಲ್ಲ'' ಎಂದು ಸ್ಪಷ್ಟಪಡಿಸಿದ್ದಾರೆ.
ಒಟ್ಟಿನಲ್ಲಿ AITVMI ಪಕ್ಷದ ವಿಚಾರವೇ ದೊಡ್ಡ ಮಟ್ಟಿಗೆ ಚರ್ಚೆಯಾಗುತ್ತಿದ್ದು ವಿಜಯ್ ಮುಂದಿನ ನಡೆ ಏನು ಎಂಬುದು ಕೆಲವೇ ದಿನಗಳಲ್ಲಿ ತಿಳಿಯಲಿದೆ.