ಈ ವರ್ಷ ಕನ್ನಡ ಚಿತ್ರರಂಗಕ್ಕೆ ಕರಾಳ ವರ್ಷ ಎಂಬುದು ಮತ್ತೆ ಮತ್ತೆ ಸಾಬೀತಾಗುತ್ತಿದೆ. ಇತ್ತೀಚೆಗಷ್ಟೇ ಹಿರಿಯ ನಟ ಸಿದ್ದರಾಜ್ ಕಲ್ಯಾಣ್ಕರ್ ತಮ್ಮ ಹುಟ್ಟುಹಬ್ಬದಂದೇ ನಿಧನರಾಗಿದ್ದರು. ಇದೀಗ ಹಿರಿಯ ಪೋಷಕರ ನಟ ರಾಕ್ಲೈನ್ ಸುಧಾಕರ್ ಕೂಡಾ ಇಹಲೋಕ ತ್ಯಜಿಸಿದ್ದಾರೆ.
ಖ್ಯಾತ ಪೋಷಕ ನಟ ರಾಕ್ಲೈನ್ ಸುಧಾಕರ್ ಇನ್ನಿಲ್ಲ - Veteran actor Rock line sudhakar dead
'ಡಕೋಟ' ಚಿತ್ರದ ಮೂಲಕ ಆ್ಯಕ್ಟಿಂಗ್ ಆರಂಭಿಸಿ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದ ಹಿರಿಯ ನಟ ರಾಕ್ಲೈನ್ ಸುಧಾಕರ್ ನಿಧನರಾಗಿದ್ದಾರೆ. 'ಶುಗರ್ಲೆಸ್' ಚಿತ್ರೀಕರಣದ ಸ್ಥಳದಲ್ಲೇ ಸುಧಾಕರ್ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಇಂದು 'ಶುಗರ್ಲೆಸ್' ಸಿನಿಮಾ ಶೂಟಿಂಗ್ನಲ್ಲಿ ಪಾಲ್ಗೊಂಡಿದ್ದ ರಾಕ್ಲೈನ್ ಸುಧಾಕರ್, ಶೂಟಿಂಗ್ ಸ್ಥಳದಲ್ಲೇ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎನ್ನಲಾಗಿದೆ. 2012ರಲ್ಲಿ ಡಕೋಟಾ ಎಂಬ ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಸುಧಾಕರ್, ಕನ್ನಡ ಚಿತ್ರರಂಗದ ಕೋಟಿ ನಿರ್ಮಾಪಕ ಎಂದು ಕರೆಸಿಕೊಂಡಿರುವ ರಾಕ್ಲೈನ್ ವೆಂಕಟೇಶ್ ಜೊತೆ ಹಲವು ವರ್ಷಗಳು ಕೆಲಸ ಮಾಡಿದ್ದ ಕಾರಣ ಅವರಿಗೆ ರಾಕ್ಲೈನ್ ಸುಧಾಕರ್ ಎಂಬ ಹೆಸರು ಬಂತು.
ಪರಮಾತ್ಮ, ಟೋಪಿವಾಲ, ವಾಸ್ತು ಪ್ರಕಾರ, ಲವ್ ಇನ್ ಮಂಡ್ಯ, ಮಿಸ್ಟರ್ ಅಂಡ್ ಮಿಸೆಸ್ ರಾಮಾಚಾರಿ, ಮುಕುಂದ ಮುರಾರಿ ಸೇರಿದಂತೆ ಹಲವಾರು ಸಿನಿಮಾಗಳಲ್ಲಿ ರಾಕ್ಲೈನ್ ಸುಧಾಕರ್ ಅಭಿನಯಿಸಿದ್ದಾರೆ. ಅವರಿಗೆ ಹೆಸರು ತಂದುಕೊಟ್ಟದ್ದು ದಿಗಂತ್ ಅಭಿನಯದ ಪಂಚರಂಗಿ ಸಿನಿಮಾ. ಲಾಕ್ಡೌನ್ ಸಮಯದಲ್ಲಿ ಕೊರೊನಾ ಸೋಂಕಿಗೆ ಒಳಗಾಗಿದ್ದ ಸುಧಾಕರ್ ಮನೆಯಲ್ಲೇ ಕ್ವಾರಂಟೈನ್ ಇದ್ದು ಚಿಕಿತ್ಸೆ ಪಡೆದು ಗುಣಮುಖರಾಗಿದ್ದರು. ಇದೀಗ ಚಿತ್ರೀಕರಣ ಆರಂಭವಾದ ಹಿನ್ನೆಲೆ 'ಶುಗರ್ ಲೆಸ್' ಚಿತ್ರದ ಶೂಟಿಂಗ್ನಲ್ಲಿ ಭಾಗವಹಿಸಿದ್ದರು. ಆದರೆ ಮೇಕಪ್ ಮಾಡಿಕೊಳ್ಳುವಾಗ ಸುಧಾಕರ್ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ರಾಕ್ಲೈನ್ ಸುಧಾಕರ್ ನಿಧನಕ್ಕೆ ಚಿತ್ರರಂಗದ ಗಣ್ಯರು ಸಂತಾಪ ಸೂಚಿಸಿದ್ದಾರೆ. ಇಂದು ಸಂಜೆ ಸುಧಾಕರ್ ಅಂತ್ಯಕ್ರಿಯೆ ನೆರವೇರಲಿದೆ.