ಅನರ್ಹ ಶಾಸಕ ಬಿ.ಸಿ. ಪಾಟೀಲ್ ರಾಜಕೀಯ ಮಾತ್ರವಲ್ಲ ಸಿನಿಮಾ ಕ್ಷೇತ್ರದಲ್ಲೂ ತಮ್ಮನ್ನು ಗುರುತಿಸಿಕೊಂಡಿರುವವರು. ರಾಜಕೀಯ ವ್ಯಕ್ತಿ, ನಟ ಮಾತ್ರವಲ್ಲದೆ ಚಿತ್ರಗಳನ್ನು ಕೂಡಾ ಅವರು ನಿರ್ಮಿಸಿದ್ದಾರೆ. ಹಿರೇಕೆರೂರು ವಿಧಾನಸಭಾ ಕ್ಷೇತ್ರದಿಂದ ಅವರು ಮೂರು ಬಾರಿ ಆಯ್ಕೆ ಆಗಿ ಬಂದರೂ ಪಕ್ಷದಲ್ಲಿ ಮಂತ್ರಿಸ್ಥಾನ ಸಿಗಲಿಲ್ಲ ಎಂಬ ಅಸಮಾಧಾನ ಇವರಿಗೆ ಇಂದಿಗೂ ಇದೆ.
ನಾನು ಪೊಲೀಸ್ ಇಲಾಖೆಯಲ್ಲಿ ಇದ್ದಿದ್ದರಿಂದ ಗೃಹಖಾತೆ ಇಷ್ಟ...ಮನದಾಸೆ ಬಿಚ್ಚಿಟ್ಟ ಕೌರವ
ನಾನು ಪೊಲೀಸ್ ಇಲಾಖೆಯಲ್ಲಿ ಈ ಮೊದಲು ಕೆಲಸ ನಿರ್ವಹಿಸುತ್ತಿದ್ದರಿಂದ ನನಗೆ ಗೃಹಖಾತೆ ಇಷ್ಟ ಎಂದು ಅನರ್ಹ ಶಾಸಕ ಬಿ.ಸಿ. ಪಾಟೀಲ್ ಹೇಳಿಕೊಂಡಿದ್ದಾರೆ. ಇನ್ನು ಬಿ.ಸಿ.ಪಾಟೀಲ್ 25 ವರ್ಷಗಳ ಹಿಂದೆ ನಿರ್ಮಿಸಿದ್ದ ಡಾ. ವಿಷ್ಣುವರ್ಧನ್ ಅಭಿನಯಿಸಿದ್ದ ‘ನಿಷ್ಕರ್ಷ’ ಹೊಸ ತಂತ್ರಜ್ಞಾನದೊಂದಿಗೆ ಶೀಘ್ರದಲ್ಲೇ ಮರುಬಿಡುಗಡೆಯಾಗಲಿದೆ.
ಮಂತ್ರಿಸ್ಥಾನ ಸಿಗದ ಕಾರಣ ಇತರ 16 ಶಾಸಕರೊಂದಿಗೆ ಬಿ.ಸಿ. ಪಾಟೀಲ್ ಕೂಡಾ ಪಕ್ಷಾಂತರ ಮಾಡಿದರು. ಜೆಡಿಎಸ್, ಕಾಂಗ್ರೆಸ್ ಮೈತ್ರಿ ಸರ್ಕಾರ ಉರುಳುವುದಕ್ಕೂ ಕಾರಣವಾದರು. ಇನ್ನು ಅನರ್ಹ ಶಾಸಕರ ಅರ್ಜಿ ವಿಚಾರಣೆ ಕೋರ್ಟಿನಲ್ಲಿ ಮುಂದಿನ ವಾರ ನಡೆಯಲಿದೆ. ಬಿ.ಸಿ. ಪಾಟೀಲ್ ಸುಮಾರು 25 ವರ್ಷಗಳ ಹಿಂದೆ ನಿರ್ಮಿಸಿದ್ದ ‘ನಿಷ್ಕರ್ಷ’ ಸಿನಿಮಾ ಮರು ಬಿಡುಗಡೆ ದಿನಾಂಕ ಘೋಷಿಸುವ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಅವರು ಮಾತನಾಡಿದರು. ನಾನು ಈ ಮುನ್ನ ಪೊಲೀಸ್ ಇಲಾಖೆಯಲ್ಲಿ ಇದ್ದ ಕಾರಣ ನನಗೆ ಗೃಹಮಂತ್ರಿ ಆಗುವ ಆಕಾಂಕ್ಷೆ ಇಟ್ಟುಕೊಂಡಿದ್ದೇನೆ ಎಂದು ತಮ್ಮ ಮನದಾಸೆಯನ್ನು ಹೇಳಿಕೊಂಡರು.
ಎಸಿಪಿ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಬಿ.ಸಿ. ಪಾಟೀಲ್ ಶಿಸ್ತಿನಿಂದ ಡ್ಯೂಟಿ ಮಾಡಿದವರು. ಸಿನಿಮಾದಲ್ಲಿ ಕೂಡಾ ಇವರಿಗೆ ಆಸಕ್ತಿ ಇದ್ದಿದ್ದರಿಂದ ಸಿನಿಮಾ, ಪೊಲೀಸ್ ಇಲಾಖೆ ಎರಡರಲ್ಲೂ ಒಟ್ಟೊಟ್ಟಿಗೆ ಇರಬಾರದು ಎಂದು ಆಜ್ಞೆ ಬಂದಾಗ ಸರ್ಕಾರಿ ಕೆಲಸವನ್ನು ಬಿಟ್ಟು ಖಾಕಿ ಕಳಚಿ ಸಿನಿಮಾಗೆ ಬಂದರು, ನಂತರ ರಾಜಕೀಯಕ್ಕೂ ಧುಮುಕಿದರು. ಇನ್ನು ಸೆಪ್ಟೆಂಬರ್ 18 ಡಾ. ವಿಷ್ಣುವರ್ಧನ್ ಜನ್ಮದಿನದ ವಿಶೇಷವಾಗಿ ಬಿ.ಸಿ. ಪಾಟೀಲ್ ನಿರ್ಮಾಣದ ‘ನಿಷ್ಕರ್ಷ’ ಸಿನಿಮಾ ಮರುಬಿಡುಗಡೆಯಾಗಲಿದೆ. ಸುಮಾರು 1 ಕೋಟಿ ರೂಪಾಯಿ ಖರ್ಚು ಮಾಡಿ ಈ ಸಿನಿಮಾಗೆ ಆಧುನಿಕ ತಾಂತ್ರಿಕ ಸ್ಪರ್ಶ ನೀಡಲಾಗಿದೆ. ಕನ್ನಡ ಹಾಗೂ ಹಿಂದಿ ಎರಡರಲ್ಲೂ ಸಿನಿಮಾ ಬಿಡುಗಡೆಯಾಗಲಿದೆ. ಈ ಸಿನಿಮಾವನ್ನು ಸುನಿಲ್ಕುಮಾರ್ ದೇಸಾಯಿ ನಿರ್ದೇಶಿಸಿದ್ದರು.