'ಅವನೇ ಶ್ರೀಮನ್ನಾರಾಯಣ' ಸಿನಿಮಾ ಬಳಿಕ ಸಿಂಪಲ್ ಸ್ಟಾರ್ ಜನಪ್ರಿಯತೆಯ ರಕ್ಷಿತ್ ಶೆಟ್ಟಿ ಅಭಿನಯದ ಯಾವ ಸಿನಿಮಾಗಳೂ ರಿಲೀಸ್ ಆಗಿಲ್ಲ. ಕಳೆದೆರಡು ವರ್ಷಗಳಿಂದ ತಯಾರಾಗುತ್ತಿರುವ '777 ಚಾರ್ಲಿ' ಸಿನಿಮಾದ ಜಪ ಮಾಡುತ್ತಿರುವ ರಕ್ಷಿತ್ ಶೆಟ್ಟಿ, ಅಭಿಮಾನಿಗಳಿಗೊಂದು ಸಿಹಿ ಸುದ್ದಿ ನೀಡಿದ್ದಾರೆ.
ಆರು ತಿಂಗಳಿಗೊಮ್ಮೆ ಈ ಚಿತ್ರದ ಪೋಸ್ಟರ್ ರಿವೀಲ್ ಮಾಡುವ ಮೂಲಕ ಚಂದನವನದಲ್ಲಿ ಆಗಾಗ ಸುದ್ದಿ ಮಾಡುತ್ತಿರುವ ಚಿತ್ರ ತಂಡದಿಂದ ಕೊನೆಗೂ ಹೊಸ ಸುದ್ದಿ ಹೊರಬಿದ್ದಿದೆ. ಸದ್ಯದಲ್ಲೇ 777 ಚಾರ್ಲಿ ಚಿತ್ರದ ಟೀಸರ್ ರಿಲೀಸ್ ಮಾಡಲು ದಿನ ನಿಗದಿ ಮಾಡಲಾಗಿದೆ.
ಹೌದು, ಮುಂದಿನ ತಿಂಗಳು ಜೂನ್ 6 ರಂದು ರಕ್ಷಿತ್ ಶೆಟ್ಟಿ ಹುಟ್ಟುಹಬ್ಬ ಇದೆ. ಬರ್ತ್‌ಡೇ ಪ್ರಯುಕ್ತ ಚಿತ್ರದ ಅಧಿಕೃತ ಟೀಸರ್ ಲೈಫ್ ಆಫ್ ಚಾರ್ಲಿ ಬಿಡುಗಡೆಯಾಗಲಿದೆ. ಈ ವಿಚಾರವನ್ನು ರಕ್ಷಿತ್ ಶೆಟ್ಟಿ ಸೋಷಿಯಲ್ ಮೀಡಿಯಾದಲ್ಲಿ ತಿಳಿಸಿದ್ದಾರೆ. ಜೊತೆಗೆ ಈ ಚಿತ್ರದ ಅಫೀಶಿಯಲ್ ಟೀಸರ್, ಲೈಫ್ ಆಫ್ ಚಾರ್ಲಿ' ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ ಎಂಬುದನ್ನೂ ಅವರು ಹೇಳಿದ್ದಾರೆ.