ಕೋವಿಡ್-19 ಗಾಗಿ ಚೆನ್ನೈ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಖ್ಯಾತ ಗಾಯಕ ಎಸ್.ಪಿ. ಬಾಲಸುಬ್ರಹ್ಮಣ್ಯಂ ಆರೋಗ್ಯ ಸುಧಾರಿಸುತ್ತಿದೆ ಎಂದು ಎಸ್ಪಿಬಿ ಪುತ್ರ ಎಸ್.ಪಿ. ಚರಣ್ ಮಾಹಿತಿ ನೀಡಿದ್ದಾರೆ.
ಅಪ್ಪ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ....ಎಸ್ಪಿಬಿ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ ಪುತ್ರ - SPB getting recover
ಎಸ್ಪಿಬಿ ಆರೋಗ್ಯದ ಬಗ್ಗೆ ಮಾಹಿತಿ ನೀಡಿರುವ ಎಸ್.ಪಿ. ಚರಣ್ ತಂದೆ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ಈಗ ಅವರ ಆರೋಗ್ಯ ಪರಿಸ್ಥಿತಿ ಸುಧಾರಿಸುತ್ತಿದೆ ವೈದ್ಯರು ಚಿಕಿತ್ಸೆ ಮುಂದುವರೆಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಲೈವ್ನಲ್ಲಿ ಮಾತನಾಡಿದ ಎಸ್.ಪಿ. ಚರಣ್, ನನ್ನ ತಂದೆಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರೊಂದಿಗೆ ಮಾತನಾಡಿದೆ. ಅಪ್ಪನ ಆರೋಗ್ಯ ಸುಧಾರಿಸುತ್ತಿದೆ. ನಿನ್ನೆಯಿಂದ ಅವರು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ನನ್ನ ತಂದೆ ಆರೋಗ್ಯಕ್ಕಾಗಿ ಪ್ರಾರ್ಥಿಸಿದ ನಿಮ್ಮೆಲ್ಲರಿಗೂ ಚಿರಋಣಿ. ಜೊತೆಗೆ ಅಪ್ಪನ ಆರೋಗ್ಯದ ಕಾಳಜಿ ಮಾಡುತ್ತಿರುವ ಆಸ್ಪತ್ರೆ ವೈದ್ಯರಿಗೂ ನಾನು ಧನ್ಯವಾದ ಹೇಳಲು ಬಯಸುತ್ತೇನೆ. ಅಪ್ಪ ಶೀಘ್ರವೇ ಗುಣಮುಖರಾಗಲಿದ್ದಾರೆ. ಅಪ್ಪನಿಗಾಗಿ ಪ್ರಾರ್ಥಿಸಿ, ಆದಷ್ಟು ಬೇಗ ಅವರು ಚೇತರಿಸಿಕೊಂಡು ಮೊದಲಿನಂತಾಗಲಿ ಎಂದು ಮನವಿ ಮಾಡಿದ್ದಾರೆ.
ಇದರೊಂದಿಗೆ ಮತ್ತೊಂದು ವಿಚಾರದ ಬಗ್ಗೆ ಮಾತನಾಡಿರುವ ಎಸ್.ಪಿ. ಚರಣ್, 'ತಮಿಳಿನಲ್ಲಿ ಮಾತನಾಡುವಂತೆ ಬಹಳಷ್ಟು ಮಂದಿ ಸಂದೇಶ ಕಳಿಸುತ್ತಿದ್ದೀರಿ. ನನ್ನ ತಂದೆಗೆ ದೇಶಾದ್ಯಂತ ಕನ್ನಡ, ತೆಲುಗು, ತಮಿಳು, ಮಲಯಾಳಂ ಸೇರಿ ಅನೇಕ ಭಾಷೆಯ ಅಭಿಮಾನಿಗಳಿದ್ದಾರೆ. ನಾನು ಎಲ್ಲಾ ಭಾಷೆಗಳಲ್ಲೂ ನಿಮಗೆ ಮಾಹಿತಿ ನೀಡಲು ಸಮಯವಿಲ್ಲ. ತಂದೆ ಗುಣಮುಖರಾಗಲೆಂದು ಪೂಜೆ ಪುನಸ್ಕಾರಗಳಲ್ಲಿ ಹೆಚ್ಚು ಭಾಗಿಯಾಗುತ್ತಿದ್ದೇನೆ. ವೈದ್ಯರೊಂದಿಗೆ ಆಗ್ಗಾಗ್ಗೆ ತಂದೆ ಬಗ್ಗೆ ಚರ್ಚಿಸುವುದರಿಂದ ಬ್ಯುಸಿ ಇರುತ್ತೇನೆ. ಆದ ಕಾರಣ ನಾನು ಅಪ್ಪನ ಆರೋಗ್ಯದ ಬಗ್ಗೆ ಇಂಗ್ಲೀಷ್ ಭಾಷೆಯಲ್ಲಿ ಮಾಹಿತಿ ನೀಡುತ್ತಿದ್ದೇನೆ. ಅರ್ಥವಾಗದವರಿಗೆ ದಯವಿಟ್ಟು ಇಂಗ್ಲೀಷ್ ತಿಳಿದಿರುವವರು ವಿವರಿಸಿ ಹೇಳಿ ಎಂದು ಎಸ್ಪಿ ಚರಣ್ ಮನವಿ ಮಾಡಿದ್ದಾರೆ.