ನಿನ್ನೆ ನಿಧನರಾದ ಖ್ಯಾತ ಗಾಯಕ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅಂತ್ಯಕ್ರಿಯೆ ತಮಿಳುನಾಡು ತಿರುವಳ್ಳೂರು ಜಿಲ್ಲೆಯ ತಾಮರೈಪಾಕಂನಲ್ಲಿ ಸಕಲ ವಿಧಿವಿಧಾನಗಳೊಂದಿಗೆ ಜರುಗಿದೆ. ಎಸ್ಪಿಬಿಗೆ ಎಲ್ಲರೂ ಭಾರದ ಹೃದಯದಿಂದ ವಿದಾಯ ಹೇಳಿದ್ದಾರೆ.
ಎಸ್ಪಿಬಿ ಅವರನ್ನು ಎಲ್ಲಾ ಗಣ್ಯರು ನೆನೆದು ಕಂಬನಿ ಮಿಡಿಡಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕೂಡಾ ಎಸ್ಪಿಬಿ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. 2003 ರಲ್ಲಿ ಬೆಂಗಳೂರಿನ ದೊಡ್ಡಕಲ್ಲಸಂದ್ರದಲ್ಲಿ ನಡೆದ ನೂರೊಂದು ನೆನಪು ಸಂಗೀತ ಸಂಜೆ ಕಾರ್ಯಕ್ರಮದಲ್ಲಿ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರನ್ನು ಡಿ.ಕೆ. ಶಿವಕುಮಾರ್ ಸನ್ಮಾನಿಸಿದ್ದರು.
ಈ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಎಸ್.ಪಿ. ಬಾಲಸುಬ್ರಹ್ಮಣ್ಯಂ "ಚಿತ್ರರಂಗದಲ್ಲಿ ನಾನೇನಾದರೂ ಪುಟ್ಟ ಸಾಧನೆ ಮಾಡಿದ್ದೇನೆ ಎಂದರೆ ಅದಕ್ಕೆ ಕನ್ನಡ ನಾಡಿನ ಜನತೆಯ ಆಶೀರ್ವಾದವೇ ಪ್ರಮುಖ ಕಾರಣ. ಮೊದಲಿನಿಂದಲೂ ಅವರು ತೋರಿಸುತ್ತಿರುವ ಅಭಿಮಾನ, ಪ್ರೀತಿಯನ್ನು ನಾನೆಂದೂ ಮರೆಯುವುದಿಲ್ಲ" ಎಂದು ಕನ್ನಡಿಗರಿಗೆ ಹೃದಯಪೂರ್ವಕ ಕೃತಜ್ಞತೆ ಅರ್ಪಿಸಿದ್ದರು.
ಎಸ್ಪಿಬಿ ಅವರಿಗೆ ಸನ್ಮಾನ ನಾನು ಗಾಯಕನಾಗಿ ಈಗಾಗಲೇ 49 ವರ್ಷಗಳನ್ನು ಪೂರೈಸಿದ್ದೇನೆ. ನನ್ನ ಮಾತೃಭಾಷೆ ತೆಲುಗು ಆದರೂ ನಾನು ಹಾಡಿದ 2 ನೇ ಹಾಡು ಕನ್ನಡ ಚಿತ್ರದ್ದು. ಆಗ ನನಗೆ ಕನ್ನಡ ಭಾಷೆ ಬರುತ್ತಿರಲಿಲ್ಲ. ಹಿರಿಯ ಸಂಗೀತ ನಿರ್ದೇಶಕರಾದ ಎಂ. ರಂಗರಾವ್ ಅವರೇ ನನಗೆ ಕರೆದು ನೀನು ಚೆನ್ನಾಗಿ ಹಾಡುತ್ತೀಯ ಎಂದು ಹುರಿದುಂಬಿಸಿ ಹಾಡಿಸಿದರು. ಅಂದಿನಿಂದ ಕನ್ನಡ ಚಿತ್ರರಂಗ ನನಗೆ ತುಂಬಾ ಪ್ರೋತ್ಸಾಹ ನೀಡಿ ನನ್ನನ್ನು ಇಲ್ಲಿವರೆಗೆ ಬೆಳೆಸಿದೆ. ನನಗೆ ಗಾಯಕನಾಗಿ ದೊಡ್ಡ ಹೆಸರು ತಂದುಕೊಟ್ಟದ್ದು ಕನ್ನಡ ಚಿತ್ರರಂಗ. ನನ್ನನ್ನು ಈ ಮಟ್ಟಕ್ಕೆ ಬೆಳೆಸಿದ ಕನ್ನಡ ನಾಡಿನ ಜನತೆಗೆ ನಾನು ಸದಾ ಋಣಿಯಾಗಿರುತ್ತೇನೆ" ಎಂದು ಭಾವುಕರಾಗಿ ಹೇಳಿಕೊಂಡಿದ್ದರು.