ಟೀಸರ್ ಹಾಗೂ ಹಾಡುಗಳಿಂದಲೇ ಸ್ಯಾಂಡಲ್ವುಡ್ನಲ್ಲಿ ಸದ್ದು ಮಾಡುತ್ತಿರುವ ಚಿತ್ರ ಸಲಗ. ಆನೆ ನಡೆದಿದ್ದೇ ದಾರಿ ಅಂತಾ ಅಡಿಬರಹ ಹೊಂದಿರುವ ಸಲಗ ಚಿತ್ರದಲ್ಲಿ ದುನಿಯಾ ವಿಜಯ್ ನಟಿಸಿದ್ದು, ಚೊಚ್ಚಲ ಬಾರಿಗೆ ನಿರ್ದೇಶನ ಮಾಡಿದ್ದಾರೆ. ಈ ಚಿತ್ರ ವರಮಹಾಲಕ್ಷ್ಮೀ ಹಬ್ಬದಂದು ಬಿಡುಗಡೆಯಾಗಲಿದೆ.
ಇದೀಗ ಸಲಗ ಚಿತ್ರದ ಪ್ರಮೋಷನಲ್ ಹಾಡು ರಿಲೀಸ್ ಆಗಿದ್ದು, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಈ ಹಾಡು ಹಿಟ್ ಆಗಲಿ ಎಂದು ಹಾರೈಸಿದ್ದಾರೆ. ಬೆಂಗಳೂರಿನ ವರ್ಲ್ಡ್ ಟ್ರೇಡ್ ಸೆಂಟರ್ ಮತ್ತು ಶರಟಾನ್ ಹೋಟೆಲ್ನಲ್ಲಿ ಸಲಗ ಪ್ರಮೋಷನಲ್ ಸಾಂಗ್ನ್ನು ಚಿತ್ರೀಕರಣ ಮಾಡಲಾಗಿದೆ.
ಈ ಹಾಡಿನ ವಿಶೇಷ ಅಂದರೆ 70 ರಿಂದ 75 ಜನ ಸಿದ್ದಿ ಕಲಾವಿದರು ಈ ಹಾಡಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸಿದ್ದಿ ಜನರ ಜೊತೆ ದುನಿಯಾ ವಿಜಯ್ ವಿಶಿಷ್ಟ ಗೆಟಪ್ನಲ್ಲಿ ಕಾಣಿಸಿಕೊಂಡು ಮಸ್ತ್ ಸ್ಟೆಪ್ ಹಾಕಿದ್ದಾರೆ. ಸಂಗೀತ ನಿರ್ದೇಶಕ ಚರಣ್ ರಾಜ್ ಮ್ಯೂಸಿಕ್ ನೀಡಿರುವ ಈ ಹಾಡನ್ನ ಗಿರಿಜಾ ಸಿದ್ಧಿ ಹಾಗು ಗೀತಾ ಸಿದ್ಧಿ ಹಾಡಿದ್ದಾರೆ.
ಕೊರಿಯೋಗ್ರಾಫರ್ ಮುರಳಿ ಮಾಸ್ಟರ್ ಹಾಡಿಗೆ ನೃತ್ಯ ಸಂಯೋಜನೆ ಮಾಡಿದ್ದಾರೆ. ಈ ಹಾಡಿನಲ್ಲಿ ಅಂಡರ್ ವರ್ಲ್ಡ್ ಕಥೆಯ ಬಗ್ಗೆ ಹೇಳುವ ಪ್ರಯತ್ನ ಆಗಿದ್ದು, ದುನಿಯಾ ವಿಜಯ್, ಡಾಲಿ ಧನಂಜಯ್, ನಟಿ ಸಂಜನಾ ಆನಂದ್, ಕಾಕ್ರೋಜ್ ಸುಧೀ ಸೇರಿದಂತೆ ಸಾಕಷ್ಟು ತಾರಾಬಳಗವಿದೆ. ನಿರ್ಮಾಪಕ ಕೆ.ಪಿ ಶ್ರೀಕಾಂತ್ ಸಲಗ ಚಿತ್ರವನ್ನ ಅದ್ದೂರಿಯಾಗಿ ನಿರ್ಮಾಣ ಮಾಡಿದ್ದಾರೆ. ಸದ್ಯ ಸಲಗ ಪ್ರಮೋಷನಲ್ ಹಾಡು ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.