ಕನ್ನಡ ಚಿತ್ರರಂಗದಲ್ಲಿ ಕರುನಾಡ ಚಕ್ರವರ್ತಿ ಎಂದೇ ಫೇಮಸ್ ಆಗಿರುವ ನಟ ಶಿವರಾಜ್ ಕುಮಾರ್ ಸದ್ಯ ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ಮಾಡುತ್ತಿದ್ದಾರೆ. ಇದೀಗ ಶಿವಣ್ಣನ 124ನೇ ಚಿತ್ರ ಖಾಸಗಿ ಹೊಟೇಲ್ನಲ್ಲಿ ಸೆಟ್ಟೇರಿದೆ. ಈ ಸಿನಿಮಾಗೆ 'ನೀ ಸಿಗೋವರೆಗೂ' ಎಂದು ಟೈಟಲ್ ಇಡಲಾಗಿದೆ.
ಈ ಸಿನಿಮಾದ ಮುಹೂರ್ತಕ್ಕೆ ಕಿಚ್ಚ ಸುದೀಪ್ ಅತಿಥಿಯಾಗಿ ಆಗಮಿಸಿ ಕ್ಲ್ಯಾಪ್ ಮಾಡಿ ಶುಭ ಹಾರೈಸಿದ್ದಾರೆ. ಈ ಸಂದರ್ಭದಲ್ಲಿ ಶಿವರಾಜ್ ಕುಮಾರ್ ಪತ್ನಿ ಗೀತಾ ಶಿವರಾಜ್, ನಟಿ ಮೆಹ್ರೀನ್ ಪಿರ್ಜಾಡಾ, ನಿರ್ಮಾಪಕರಾದ ಜ್ಯಾಕ್ ಮಂಜು, ಕೆ.ಪಿ ಶ್ರೀಕಾಂತ್ ಉಪಸ್ಥಿತರಿದ್ದರು.
ಟಾಲಿವುಡ್ ಮೂಲದ ರಾಮ್ ಧೂಲಿಪುಡಿ 'ನೀ ಸಿಗೋವರೆಗೂ' ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾ ಮೂಲಕ ಸೌತ್ ಸುಂದರಿ ಮೆಹ್ರೀನ್ ಪಿರ್ಜಾಡಾ ಇದೇ ಮೊದಲ ಬಾರಿಗೆ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಇದರ ಜೊತೆಗೆ ತಮಿಳಿನ ಖ್ಯಾತ ನಟರಾದ ನಾಜರ್, ಸಂಪತ್ ಹಾಗೂ ಗಾಯಕಿ ಮಂಗ್ಲಿ ಸಹ ಈ ಚಿತ್ರದ ಮುಖ್ಯ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.
ಸೆಂಚುರಿ ಸ್ಟಾರ್ ಶಿವಣ್ಣನ 124ನೇ ಚಿತ್ರಕ್ಕೆ ಕ್ಲ್ಯಾಪ್ ಮಾಡಿದ ಅಭಿನಯ ಚಕ್ರವರ್ತಿ ಕಿಚ್ಚ 70ದಿನಗಳ ಕಾಲ ಚಿಕ್ಕಮಗಳೂರು, ಬೆಂಗಳೂರು, ಜಮ್ಮು ಹಾಗೂ ಕಾಶ್ಮೀರ ಮುಂತಾದ ಕಡೆ ಸಿನಿಮಾ ಚಿತ್ರೀಕರಣ ನಡೆಸಲು ನಿರ್ದೇಶಕ ರಾಮ್ ಧೂಲಿಪುಡಿ ಪ್ಲಾನ್ ಮಾಡಿದ್ದಾರೆ. ಈ ಚಿತ್ರಕ್ಕೆ ರವಿಕುಮಾರ್ ಸನಾ ಅವರ ಛಾಯಾಗ್ರಹಣವಿದೆ. ಟಗರು ಖ್ಯಾತಿಯ ಚರಣ್ ರಾಜ್ ಸಂಗೀತ ನಿರ್ದೇಶನ, ದೀಪು ಎಸ್.ಕುಮಾರ್ ಸಂಕಲನ, ರವಿವರ್ಮ ಸಾಹಸ ನಿರ್ದೇಶನ ಹಾಗೂ ರವಿ ಸಂತೆಹಕ್ಲು ಕಲಾ ನಿರ್ದೇಶನ ಈ ಹೊಸ ಚಿತ್ರಕ್ಕಿದೆ.
ಈ ಚಿತ್ರ ಬಾಲಶ್ರೀರಾಮ್ ಸ್ಟುಡಿಯೋಸ್ ಲಾಂಛನದಡಿಯಲ್ಲಿ ಮೂಡಿ ಬರಲಿದೆ. ಸ್ವಾತಿ ವನಪಲ್ಲಿ, ಶ್ರೀಕಾಂತ್ ದುಲಿಪುಡಿ ಹಾಗೂ ನಾರಾಲ ಶ್ರೀನಿವಾಸ ರೆಡ್ಡಿ ನಿರ್ಮಿಸುತ್ತಿದ್ದಾರೆ.