ಕನ್ನಡ ಚಿತ್ರರಂಗದ ಜಂಟಲ್ಮ್ಯಾನ್, ನಿರ್ದೇಶಕ ರಮೇಶ್ ಅರವಿಂದ್ ಇದೇ ಸೆಪ್ಟೆಂಬರ್ 10 ರಂದು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ರಮೇಶ್ ಬರ್ತಡೇ ವಿಶೇಷವಾಗಿ 'ಶಿವಾಜಿ ಸುರತ್ಕಲ್'...ದಿ ಕೇಸ್ ಆಫ್ ರಣಗಿರಿ ರಹಸ್ಯ ಚಿತ್ರದ ಟೀಸರ್ ಬಿಡುಗಡೆಯಾಗಲಿದೆ.
ರಮೇಶ್ ಅರವಿಂದ್ ಹುಟ್ಟುಹಬ್ಬಕ್ಕೆ 'ಶಿವಾಜಿ ಸುರತ್ಕಲ್' ಟೀಸರ್ ಬಿಡುಗಡೆ - ಜ್ಯೂಡಾ ಸ್ಯಾಂಡಿ ಸಂಗೀತ
ಈ ಬಾರಿ ತಮ್ಮ ಹುಟ್ಟುಹಬ್ಬವನ್ನು ರಮೇಶ್ ಅರವಿಂದ್ 'ಶಿವಾಜಿ ಸುರತ್ಕಲ್' ಸಿನಿಮಾ ತಂಡದೊಂದಿಗೆ ಆಚರಿಸಿಕೊಳ್ಳುತ್ತಿದ್ದಾರೆ. ಸೆಪ್ಟೆಂಬರ್ 10 ರಂದು ರಮೇಶ್ ಬರ್ತಡೇ ಇದ್ದು ಆ ದಿನ 'ಶಿವಾಜಿ ಸುರತ್ಕಲ್' ಚಿತ್ರದ ಟೀಸರ್ ಕೂಡಾ ಬಿಡುಗಡೆಯಾಗಲಿದೆ.
'ಶಿವಾಜಿ ಸುರತ್ಕಲ್' ಚಿತ್ರತಂಡ ಟೀಸರ್ ರಿವೀಲ್ ಮಾಡುವ ಮೂಲಕ ರಮೇಶ್ ಅರವಿಂದ್ ಹುಟ್ಟುಹಬ್ಬ ಆಚರಿಸಲು ತೀರ್ಮಾನಿಸಿದೆ. ರಮೇಶ್ ಅರವಿಂದ್ ಸುಮಾರು 100 ಸಿನಿಮಾಗಳಲ್ಲಿ ಅಭಿನಯಿಸಿದ್ದರೂ ಅವರ ಚಿತ್ರದ ಯಾವುದೇ ಸಮಾರಂಭ ಜನ್ಮದಿನಕ್ಕೆ ಸೇರಿಕೊಳ್ಳುವಂತೆ ಇರಲಿಲ್ಲ. ತಾವಾಯಿತು, ತಮ್ಮ ಕುಟುಂಬ ಆಯಿತು ಎಂದು ಫ್ಯಾಮಿಲಿ ಸಂತೋಷ ಕೂಟದಲ್ಲೇ ಜನ್ಮದಿನಾಚರಣೆ ಆಚರಿಸಿಕೊಂಡಿದ್ದುಂಟು. ಆದರೆ ಇದೀಗ ‘ಶಿವಾಜಿ ಸುರತ್ಕಲ್’ ಚಿತ್ರತಂಡದ ಮೂಲಕ ಈ ಬಾರಿ ಜನ್ಮದಿನವನ್ನು ಆಚರಿಸಿಕೊಳ್ಳುತ್ತಿದ್ದಾರೆ. ‘ಶಿವಾಜಿ ಸುರತ್ಕಲ್’ ಚಿತ್ರೀಕರಣ ಮುಗಿದಿದ್ದು, ಡಬ್ಬಿಂಗ್ ಭಾಗ ಕೊನೆಯ ಹಂತದಲ್ಲಿದೆ. ರಾಧಿಕಾ ನಾರಾಯಣ್ ಹಾಗೂ ಆರೋಹಿ ನಾರಾಯಣ್ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದು, ಆಕಾಶ್ ಶ್ರೀವತ್ಸ ಚಿತ್ರಕಥೆ ಬರೆದು ನಿರ್ದೇಶಿಸುತ್ತಿದ್ದಾರೆ. ಸಿನಿಮಾಗೆ ರೇಖಾ ಕೆ. ಎನ್ ಹಾಗೂ ಅನೂಪ್ ಗೌಡ ಬಂಡವಾಳ ಹೂಡಿದ್ದಾರೆ. ಚಿತ್ರದ ಹಾಡುಗಳಿಗೆ ಜ್ಯೂಡಾ ಸ್ಯಾಂಡಿ ಸಂಗೀತ ನೀಡಿದ್ದಾರೆ. ಹಾಡಿನ ಸಾಹಿತ್ಯವನ್ನು ಜಯಂತ್ ಕಾಯ್ಕಿಣಿ ಬರೆದಿದ್ದಾರೆ.