ಕಿಡ್ನಿ ವೈಫಲ್ಯ ಹಾಗೂ ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದ 87 ವರ್ಷದ ಕನ್ನಡ ಚಿತ್ರರಂಗದ ಹಿರಿಯ ನಟ, ಕಲಾತಪಸ್ವಿ ಇಂದು ಇಹಲೋಕ ತ್ಯಜಿಸಿದ್ದಾರೆ. ಚಿತ್ರರಂಗದಲ್ಲಿ 50 ವರ್ಷಗಳ ಕಾಲ ಕಲಾ ಸೇವೆ ಮಾಡಿರುವ ಇವರು ಡಾ.ರಾಜ್ಕುಮಾರ್ ಸಮಕಾಲೀನವರು. ಚಿಕ್ಕ ಚಿಕ್ಕ ಪೋಷಕ ಪಾತ್ರಗಳಿಗೆ ಜೀವ ತುಂಬುವ ಶಕ್ತಿ ಹೊಂದಿದ್ದ ಅದ್ಭುತ ಕಲಾವಿದ ಇವರು.
ರಂಗಕರ್ಮಿ, ಕಲಾತಪಸ್ವಿ ರಾಜೇಶ್ ಜನಿಸಿದ್ದು ಬೆಂಗಳೂರಲ್ಲಿ. ಇವರ ಮೂಲ ಹೆಸರು ಮುನಿ ಚೌಡಪ್ಪ. ಆದರೆ ವಿದ್ಯಾ ಸಾಗರ್ ಹೆಸರಿನಿಂದ ರಂಗಭೂಮಿಯಲ್ಲಿ ಗುರುತಿಸಿಕೊಂಡಿದ್ದರು. ಬಳಿಕ 1968ರ ನಮ್ಮ ಊರು ಚಿತ್ರದಲ್ಲಿ ರಾಜೇಶ್ ಅಂತ ಹೆಸರು ಬದಲಿಸಿಕೊಂಡರು.
ಇವರು ನಟನೆ ಜೊತೆ ಶಕ್ತಿ ನಾಟಕ ಮಂಡಳಿ ಕಟ್ಟಿದ್ದ ರಂಗಕರ್ಮಿ. ನಿರುದ್ಯೋಗಿ ಬಾಳು, ಬಡವನ ಬಾಳು, ವಿಷ ಸರ್ಪ, ನಂದಾ ದೀಪ, ಕಿತ್ತೂರು ರಾಣಿ ಚೆನ್ನಮ್ಮ ಸೇರಿದಂತೆ ಹಲವು ನಾಟಕಗಳಲ್ಲಿ ಅಭಿನಯಿಸಿದ್ದರು.
60ರ ದಶಕದಲ್ಲಿ ವೀರ ಸಂಕಲ್ಪ ಚಿತ್ರದ ಮೂಲಕ ಬೆಳ್ಳಿತೆರೆಗೆ ಎಂಟ್ರಿ ಕೊಟ್ಟ ಇವರು ಕಪ್ಪು ಬಿಳುಪು, ಎರಡು ಮುಖ, ಪುಣ್ಯ ಪುರುಷ, ದೇವರ ಗುಡಿ, ಕಾವೇರಿ, ಕ್ರಾಂತಿ ವೀರ ಸೇರಿದಂತೆ 150ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇವರ ಕಲಾ ಸೇವೆಗೆ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ಗೌರವ ನೀಡಿ ಪುರಸ್ಕರಿಸಿತ್ತು.