ಸ್ಯಾಂಡಲ್ವುಡ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿದಿನ ಒಬ್ಬೊಬ್ಬ ನಟ-ನಟಿಯರ ಹೆಸರು ಕೇಳಿಬರುತ್ತಿದೆ. ನಿನ್ನೆಯಷ್ಟೇ ನಟಿ ರಾಗಿಣಿಗೆ ಸಿಸಿಬಿ ಅಧಿಕಾರಿಗಳು ನೋಟೀಸ್ ನೀಡಿದ್ದರು. ಇದೀಗ ಈ ಜಾಲದಲ್ಲಿ 'ಗಂಡ ಹೆಂಡತಿ' ಖ್ಯಾತಿಯ ಸಂಜನಾ ಗಲ್ರಾನಿ ಹೆಸರು ಕೇಳಿಬರುತ್ತಿದೆ.
ಸೆಲಬ್ರಿಟಿ ಆಗಿದ್ದು ಸಂಜನಾ ಗಲ್ರಾನಿ ಇಂತಹ ಪದಗಳನ್ನು ಬಳಸುವುದು ಸರೀನಾ...?
ನಿರ್ದೇಶಕ ಇಂದ್ರಜಿತ್ ಲಂಕೇಶ್ ನೀಡಿದ ಮಾಹಿತಿ ಆಧಾರದ ಮೇರೆಗೆ ಸಿಸಿಬಿ ಪೊಲೀಸರು ನಟಿ ಸಂಜನಾ ಆಪ್ತ ರಾಹುಲ್ನನ್ನು ವಶಕ್ಕೆ ಪಡೆದಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಮೊಬೈಲ್ನಲ್ಲಿ ಪ್ರತಿಕ್ರಿಯಿಸಿರುವ ಸಂಜನಾ, ಅಶ್ಲೀಲ ಪದಗಳನ್ನು ಬಳಸಿ ಮಾತನಾಡಿದ್ದಾರೆ.
ನಿರ್ದೇಶಕ ಇಂದ್ರಜಿತ್ ಲಂಕೇಶ್ ಕೆಲವು ನಟ-ನಟಿಯರ ಹೆಸರನ್ನು ಸಿಸಿಬಿ ಪೊಲೀಸರ ಮುಂದೆ ಹೇಳಿ ಕೆಲವೊಂದು ದಾಖಲೆಗಳನ್ನು ಕೂಡಾ ನೀಡಿದ್ದರು. ಇದಕ್ಕೆ ಸಂಬಂಧಿಸಿದಂತೆ ಸಂಜನಾ ಆಪ್ತ ರಾಹುಲ್ನನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದರು ಈ ಬಗ್ಗೆ ಮಾತನಾಡಲು ಈಟಿವಿ ಭಾರತದ ಪ್ರತಿನಿಧಿ ಸಂಜನಾ ಅವರಿಗೆ ಕರೆ ಮಾಡಿದ್ದಾರೆ. 'ಅನಾವಶ್ಯಕವಾಗಿ ನನ್ನ ಹೆಸರನ್ನು ಈ ಜಾಲದಲ್ಲಿ ತರುತ್ತಿದ್ದೀರಿ. ನನ್ನ ಅನುಮತಿ ಇಲ್ಲದೆ ಮಾಧ್ಯಮದವರು ನನ್ನ ಹೆಸರು ಬಳಸುತ್ತಿದ್ದೀರ ಎಂದು ಮಾಧ್ಯಮದವರ ಮೇಲೆ ಗರಂ ಆಗಿದ್ದಾರೆ. ರಾಹುಲ್ ನನಗೆ ಒಳ್ಳೆ ಫ್ರೆಂಡ್ ಅಷ್ಟೇ. ಅದಕ್ಕಿಂತ ನನಗೂ ಆತನಿಗೂ ಬೇರೆ ಸಂಬಂಧ ಇಲ್ಲ. ನನಗೆ ಯಾವ ಸಿಸಿಬಿ ನೋಟೀಸ್ ಕೂಡಾ ಬಂದಿಲ್ಲ' ಎಂದು ಹೇಳಿದ್ದಲ್ಲದೆ ಕೆಲವೊಂದು ಅಶ್ಲೀಲ ಪದ ಬಳಸಿದ್ದಾರೆ.
ಸಂಜನಾ ಈ ರೀತಿ ಮಾತನಾಡಿರುವುದಕ್ಕೆ ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಒಬ್ಬ ಸೆಲಬ್ರಿಟಿಯಾಗಿ ಹಲವರಿಗೆ ಮಾದರಿಯಾಗಬೇಕಿರುವ ಸಂಜನಾ ಈ ರೀತಿ ಮಾತನಾಡಿರುವುದು ಸರೀನಾ ಎಂದು ಪ್ರಶ್ನಿಸುತ್ತಿದ್ದಾರೆ.