ಭಾರಿ ನಿರೀಕ್ಷೆಯೊಂದಿಗೆ ತೆರೆಗಪ್ಪಳಿಸಿದ್ದ ಪ್ರಭಾಸ್ ಅಭಿಯನಯದ ಬಹುಕೋಟಿ ವೆಚ್ಚದ ತೆಲುಗು ಸಿನಿಮಾ ಸಾಹೋ ಸದ್ಯ ₹400 ಕೋಟಿ ಗಳಿಕೆ ಮಾಡಿ ತಾಕತ್ತು ಪ್ರದರ್ಶಿಸಿದೆ.
ಆಗಸ್ಟ್ 30ರಂದು ಸುಜೀತ್ ನಿರ್ದೇಶನದ ಸಾಹೋ ಚಿತ್ರ ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ಸಾವಿರಾರು ಥಿಯೇಟರ್ಗಳಲ್ಲಿ ತೆರೆಕಂಡಿತ್ತು.
ಚಿತ್ರದ ಬಜೆಟ್, ಬಾಹುಬಲಿ ಚಿತ್ರದ ಖ್ಯಾತಿ, ಅದ್ಧೂರಿ ತಾರಾಗಣ ಹಾಗೂ ಮೇಕಿಂಗ್ನಿಂದ ಚಿತ್ರದ ಮೇಲೆ ಭಾರಿ ನಿರೀಕ್ಷೆ ಹುಟ್ಟಿತ್ತು. ಆದರೆ, ಮೊದಲ ದಿನವೇ ಅಭಿಮಾನಿಗಳು ಚಿತ್ರದ ಅವಧಿ, ಗೊಂದಲಮಯ ಚಿತ್ರಕಥೆ ಹಾಗೂ ಅತಿಯಾದ ಆ್ಯಕ್ಷನ್ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು.
ಮಿಶ್ರ ಪ್ರತಿಕ್ರಿಯೆಯ ನಡುವೆಯೂ ಸಾಹೋ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಭರ್ಜರಿ ಕಲೆಕ್ಷನ್ ಮಾಡಿದೆ. ಹನ್ನೊಂದು ದಿನದಲ್ಲಿ ಸಾಹೋ ಚಿತ್ರ ₹400 ಕೋಟಿ ಗಳಿಕೆ ಮಾಡಿ ನಿರ್ಮಾಪಕರ ಮೊಗದಲ್ಲಿ ಸಂತಸ ಮೂಡಿಸಿದೆ. ಹಿಂದಿ ಭಾಷೆಯಲ್ಲಿ ಸಾಹೋ ₹130.98 ಕೋಟಿ ಕಲೆಕ್ಷನ್ ಮಾಡಿದೆ ಎಂದು ಬಾಲಿವುಡ್ ಮಾರುಕಟ್ಟೆ ವಿಶ್ಲೇಷಕ ತರಣ್ ಆದರ್ಶ್ ಟ್ವೀಟ್ ಮಾಡಿದ್ದಾರೆ.
ಸಾಹೋ ಸಿನಿಮಾ ಸುಮಾರು ₹350 ಕೋಟಿ ವೆಚ್ಚದ ಅದ್ಧೂರಿಯಾಗಿ ನಿರ್ಮಾಣ ಮಾಡಲಾಗಿದೆ. ಪ್ರಭಾಸ್, ಶ್ರದ್ಧಾ ಕಪೂರ್, ಜಾಕಿ ಶ್ರಾಫ್, ನೀಲ್ ನಿತಿನ್ ಮುಖೇಶ್ ಸೇರಿದಂತೆ ಬಹುತಾರಾಗಣ ಚಿತ್ರವನ್ನು ಅಬುದಾಬಿ, ಆಸ್ಟ್ರೇಲಿಯಾ, ಹೈದರಾಬಾದ್ನಲ್ಲಿ ಚಿತ್ರೀಕರಿಸಲಾಗಿದೆ. ಆ್ಯಕ್ಷನ್ ದೃಶ್ಯಗಳಿಗಾಗಿಯೇ ಹತ್ತಾರು ಕೋಟಿ ಖರ್ಚು ಮಾಡಲಾಗಿದೆ. ಯುವಿ ಕ್ರಿಯೇಷನ್ಸ್ ಈ ಸಿನಿಮಾವನ್ನು ನಿರ್ಮಾಣ ಮಾಡಿದೆ.