ಡಾ. ವಿಠಲ್ ರಾವ್! ಕಿರುತೆರೆ ವೀಕ್ಷಕರಿಗಂತೂ ತೀರಾ ಪರಿಚಿತ ಹೆಸರು. ದಶಕಗಳ ಹಿಂದೆ ಪ್ರಸಾರವಾಗುತ್ತಿದ್ದ ಜನಪ್ರಿಯ ಹಾಸ್ಯ ಧಾರಾವಾಹಿ 'ಸಿಲ್ಲಿ ಲಲ್ಲಿ'ಯಲ್ಲಿ ಡಾ.ವಿಠಲ್ ರಾವ್ ಆಗಿ ಕಾಣಿಸಿಕೊಂಡಿದ್ದ ರವಿಶಂಕರ್ ಗೌಡ ತಮ್ಮ ಡೈಲಾಗ್ ಮೂಲಕವೇ ಮನೆ ಮಾತಾಗಿದ್ದರು. ಐ ಆ್ಯಮ್ ಡಾಕ್ಟರ್ ವಿಠಲ್ ರಾವ್, ವೆರಿ ಫೇಮಸ್ ಇನ್ ಸರ್ಜರಿ ಆ್ಯಂಡ್ ಭರ್ಜರಿ, ಕಾಮನ್ ಟೆಲ್ ಮಿ ವಾಟ್ ಈಸ್ ಯುವರ್ ಪ್ರಾಬ್ಲಂ ಆ್ಯಂಡ್ ಶೋ ಮೀ ಯುವರ್ ಲಾಂಗ್ ಟಂಗ್ ಎಂಬ ಡೈಲಾಗ್ಗೆ ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರ ಮೂಲಕ ಎಲ್ಲರೂ ಫಿದಾ ಆಗಿದ್ದರು.
'ಡುಬಾಕ್ ಸೈಂಟಿಸ್ಟ್' ಆಗ್ತಿದ್ದಾರೆ ರವಿಶಂಕರ್ ಗೌಡ - ಡುಬಾಕ್ ಸೈಂಟಿಸ್ಟ್ ರವಿಶಂಕರ್ ಗೌಡ
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮಜಾ ಟಾಕೀಸ್ ಮೂಲಕ ರವಿಶಂಕರ್ ಕಿರುತೆರೆಗೆ ಕಮ್ ಬ್ಯಾಕ್ ಆಗಲಿದ್ದಾರೆ.
ವಿಠಲ್ ರಾವ್ ಆಗಿ ಬರೋಬ್ಬರಿ ನಾಲ್ಕು ವರ್ಷಗಳ ಕಾಲ ಕಿರುತೆರೆಯಲ್ಲಿ ಮನೆ ಮಾತಾಗಿರುವ ರವಿಶಂಕರ್ ಇದೀಗ ಕಿರುತೆರೆಯಲ್ಲಿ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಲಿದ್ದಾರೆ. ಆದರೆ ರವಿಶಂಕರ್ ಮರಳಿ ಬರುತ್ತಿರುವುದು ಧಾರಾವಾಹಿ ಮೂಲಕ ಅಲ್ಲ, ಬದಲಿಗೆ ಶೋ ಮೂಲಕ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮಜಾ ಟಾಕೀಸ್ ಮೂಲಕ ಕಿರುತೆರೆಗೆ ಕಮ್ ಬ್ಯಾಕ್ ಆಗಲಿದ್ದಾರೆ ರವಿಶಂಕರ್.
"ಮಜಾ ಟಾಕೀಸ್ನಲ್ಲಿ ನಾನು ಡುಬಾಕ್ ಸೈಂಟಿಸ್ಟ್ ಆಗಿ ಕಾಣಿಸಿಕೊಳ್ಳುತ್ತಿದ್ದೇನೆ. ಈ ಮೂಲಕ 13 ವರುಷಗಳ ನಂತರ ನನ್ನ ಮನೆಗೆ ವಾಪಸಾಗುತ್ತಿದ್ದೇನೆ. ವಿಠಲ್ ರಾವ್ ಆಗಿ ಬರೋಬ್ಬರಿ ನಾಲ್ಕು ವರ್ಷಗಳ ಕಾಲ ನಾನು ಕಿರುತೆರೆಯಲ್ಲಿ ರಂಜಿಸಿದ್ದೆ. ಇದೀಗ ಮಜಾ ಟಾಕೀಸ್ನಲ್ಲಿ ಡುಬಾಕ್ ಸೈಂಟಿಸ್ಟ್ ಆಗಿ ನಿಮ್ಮನ್ನು ಮನರಂಜಿಸಲು ಬರುತ್ತಿದ್ದೇನೆ " ಎಂದು ಹೇಳುತ್ತಾರೆ ವಿಠಲ್ ರಾವ್.