ಕರ್ನಾಟಕ

karnataka

ETV Bharat / sitara

ಉತ್ತರಕನ್ನಡದೊಂದಿಗೆ ಅಪ್ಪುವಿನ ಒಡನಾಟ ; ನೆನಪಿನ ಬುತ್ತಿ ಬಿಚ್ಚಿಟ್ಟು ಮರೆಯಾದ ಪವರ್ ಸ್ಟಾರ್..

ನೇತ್ರಾಣಿಯಲ್ಲಿ ನಡೆದ ಚಿತ್ರೀಕರಣದ ಒಂದು ತುಣುಕನ್ನು ಪುನೀತ್ ಹತ್ತು ದಿನಗಳ ಬಳಿಕ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಗೋಕರ್ಣ ಕಡಲತೀರದಲ್ಲಿ ಮಾಡಿದ್ದ ಬ್ಯಾಕ್ ಫ್ಲಿಪ್ ಸ್ಟಂಟ್‌ಗಳನ್ನೂ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಅಭಿಮಾನಿಗಳನ್ನು ರಂಜಿಸಿದ್ದರು..

punith-rajkumar
ಪವರ್​ಸ್ಟಾರ್​ ಪುನೀತ್ ರಾಜ್​ಕುಮಾರ್

By

Published : Oct 29, 2021, 6:20 PM IST

Updated : Oct 29, 2021, 7:25 PM IST

ಕಾರವಾರ :ಪವರ್​ಸ್ಟಾರ್​ ಪುನೀತ್ ರಾಜ್​ಕುಮಾರ್ ಇನ್ನು ನೆನಪು ಮಾತ್ರ. ಅವರ ಸಾವಿನ ಸುದ್ದಿ ಈಗಲೂ ಕೂಡ ಅದೆಷ್ಟೋ ಜನರಿಗೆ ನಂಬಲು ಸಾಧ್ಯವಾಗುತ್ತಿಲ್ಲ. ಜಿಲ್ಲೆಯಲ್ಲಿ ಚಿತ್ರೀಕರಿಸಿದ್ದ ಡಾಕ್ಯುಮೆಂಟರಿ ಇನ್ನೆರಡು ದಿನದಲ್ಲಿ ಬಿಡುಗಡೆಯಾಗಬೇಕಿತ್ತು. ಆದರೆ, ಇದೀಗ ಅಪ್ಪುವೇ ಇಲ್ಲದಿರುವುದು ಬರಸಿಡಿಲು ಬಡಿದಂತಾಗಿದೆ.

ಜಿಲ್ಲೆಯ ಕಡಲತೀರ, ನಿಸರ್ಗ ಸೌಂದರ್ಯ, ಇಲ್ಲಿನ ಜನ, ಜಲಪಾತಗಳ ಸೊಬಗನ್ನು ಪುನೀತ್ ರಾಜ್​ಕುಮಾರ್ ನೆಚ್ಚಿಕೊಂಡಿದ್ದರು. ಈ ಬಗ್ಗೆ ಜಿಲ್ಲೆಗೆ ಭೇಟಿ ನೀಡಿದ್ದ ವೇಳೆ ಪುನೀತ್ ಹೇಳಿಕೊಂಡಿದ್ದರು. ಹೀಗಾಗಿ, ಈ ವರ್ಷದ ಜನವರಿ-ಫೆಬ್ರವರಿಯಲ್ಲಿ ಅವರು ಹೆಚ್ಚಿನ ಸಮಯವನ್ನು ಉತ್ತರ ಕನ್ನಡದಲ್ಲೇ ಕಳೆದಿದ್ದರು.

ಉತ್ತರಕನ್ನಡದೊಂದಿಗೆ ಅಪ್ಪುವಿನ ಒಡನಾಟ

ಜಿಲ್ಲೆಗೆ ಭೇಟಿ ನೀಡಿದ್ದ ಅವರು, ಕುಮಟಾ, ಗೋಕರ್ಣ, ಮುರುಡೇಶ್ವರ, ಜೊಯಿಡಾ ತಾಲೂಕಿನಲ್ಲಿ ತಮ್ಮ ತಂಡದೊಂದಿಗೆ ತಿರುಗಾಡಿ ಡಾಕ್ಯುಮೆಂಟರಿಗಾಗಿ ಚಿತ್ರೀಕರಣ ನಡೆಸಿದ್ದರು.

ಕಡಲತೀರಗಳಲ್ಲಿ ಓಡಾಡಿ, ಸ್ಟಂಟ್ಸ್​ಗಳನ್ನೂ ಮಾಡಿದ್ದರು. ಗೋಕರ್ಣಕ್ಕೆ ಡಾಕ್ಯುಮೆಂಟರಿ ಚಿತ್ರೀಕರಣಕ್ಕಾಗಿ ಭೇಟಿ ನೀಡಿದ್ದ ಪುನೀತ್, ಸಾಮಾನ್ಯರಂತೆ ಕಡಲತೀರದಲ್ಲಿ ಅಡ್ಡಾಡಿದ್ದರು. ತೀರದ ಹೋಟೆಲ್​ಗಳಲ್ಲಿ ಖಾದ್ಯಗಳನ್ನು ಸವಿಯುತ್ತಾ ಕಾಲ ಕಳೆದಿದ್ದರು. ಗೋಕರ್ಣದ ಪುರಾಣ ಪ್ರಸಿದ್ಧ ಶ್ರೀಮಹಾಬಲೇಶ್ವರ ದೇವಾಲಯಕ್ಕೂ ಭೇಟಿ ನೀಡಿ ಆತ್ಮಲಿಂಗಕ್ಕೆ ಪೂಜೆ ಸಲ್ಲಿಸಿದ್ದರು.

ತದನಂತರ ಮುರುಡೇಶ್ವರಕ್ಕೆ ಭೇಟಿ ನೀಡಿದ್ದ ಅವರು, ಇಲ್ಲಿಗೆ ಸಮೀಪದ ನೇತ್ರಾಣಿ ದ್ವೀಪ‌ ಪ್ರದೇಶದಲ್ಲಿ ಹೆಚ್ಚಿನ ಭಾಗ ಚಿತ್ರೀಕರಣ ನಡೆಸಿದ್ದರು. ಆಗ ಮುರುಡೇಶ್ವರ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಿ ತೆರಳಿದ್ದರು.

ದೇವಾಲಯಕ್ಕೆ ಭೇಟಿ ನೀಡಿದ ನಟ ಪುನೀತ್ ರಾಜ್​ಕುಮಾರ್

ಕುಮಟಾ ಪಟ್ಟಣದ ದೇವರಹಕ್ಕಲ ಸಭಾಭವನದಲ್ಲಿ ಅವರ ಕಚೇರಿಯ ಅಕೌಂಟ್ ವಿಭಾಗದಲ್ಲಿ ಕೆಲಸ ನಿರ್ವಹಿಸುವ ಗುರುರಾಜ್ ಎಂಬುವರ ಮದುವೆ ನಿಮಿತ್ತ ಆಗಮಿಸಿದ್ದರು. ನೂತನ ವಧು-ವರರಿಗೆ ಶುಭಕೋರಿ ತೆರಳಿದ್ದರು. ಈ ವೇಳೆ ಪುನೀತ್ ಅಭಿಮಾನಿಗಳು ಕಿಕ್ಕಿರಿದು ಸೇರಿದ್ದರು. ಅವರೊಂದಿಗೆ ಸೆಲ್ಫಿಗಾಗಿ ಮುಗಿಬಿದ್ದಿದ್ದರು. ಪುನೀತ್ ತಾಳ್ಮೆಯಿಂದ ಎಲ್ಲರೊಂದಿಗೆ ಸೆಲ್ಫಿ ತೆಗೆದುಕೊಳ್ಳುತ್ತಾ, ನಗುಮುಖದಲ್ಲೇ ಮಾತನಾಡುತ್ತಾ ಜಿಲ್ಲೆಯ ಜನರ ಮನ ಗೆದ್ದಿದ್ದರು.

ನೇತ್ರಾಣಿಯಲ್ಲಿ ನಡೆದ ಚಿತ್ರೀಕರಣದ ಒಂದು ತುಣುಕನ್ನು ಪುನೀತ್ ಹತ್ತು ದಿನಗಳ ಬಳಿಕ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಗೋಕರ್ಣ ಕಡಲತೀರದಲ್ಲಿ ಮಾಡಿದ್ದ ಬ್ಯಾಕ್ ಫ್ಲಿಪ್ ಸ್ಟಂಟ್‌ಗಳನ್ನೂ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಅಭಿಮಾನಿಗಳನ್ನು ರಂಜಿಸಿದ್ದರು.

ಈ ಸಣ್ಣ ಝಲಕ್​​ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಉತ್ತರ ಕನ್ನಡ ಜಿಲ್ಲೆಯಲ್ಲಿನ ಚಿತ್ರೀಕರಣದ ಕುರಿತು ಅಭಿಮಾನಿಗಳಿಗೆ ಹಾಗೂ ಸಿನಿರಂಗಕ್ಕೆ ಚಿಕ್ಕ ಮಾಹಿತಿ ನೀಡಿದ್ದರು. ಆದರೆ, ಉತ್ತರ ಕನ್ನಡ ಜಿಲ್ಲೆಯಲ್ಲಿ ಚಿತ್ರಿಕರಣ ನಡೆದಿದ್ದ ಡಾಕ್ಯುಮೆಂಟರಿ ನವೆಂಬರ್ 1ರ ಕನ್ನಡ ರಾಜ್ಯೋತ್ಸವದಂದು ಬಿಡುಗಡೆಯಾಗಬೇಕಿತ್ತು.

ಈ ಬಗ್ಗೆ ಪುನೀತ್, 'ದಶಕಗಳ ಹಿಂದೆ ಕಥೆಯೊಂದು ಹುಟ್ಟಿತ್ತು. ನಮ್ಮ ಜನ, ನಮ್ಮ ನೆಲದ ಹಿರಿಮೆಯನ್ನು ಮೆರೆದಿತ್ತು. ನಮ್ಮ ಅಡವಿಯ ಹಸಿರನ್ನು ಜಗತ್ತಿಗೇ ಹರಡಿತ್ತು. ಪೀಳಿಗೆಗೆ ಸ್ಫೂರ್ತಿ ನೀಡಿ ಅಜರಾಮರವಾಗಿತ್ತು. ಆ ಚರಿತ್ರೆ ಮರುಕಳಿಸುವ ಸಮಯವೀಗ ಬಂದಿದೆ' ಎಂದಷ್ಟೇ ನೇತ್ರಾಣಿಯಲ್ಲಿ ಮಾಡಿದ ಸ್ಕೂಬಾ ಡೈವಿಂಗ್​ನ ಫೊಟೊವೊಂದರ ಜೊತೆ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಡಾಕ್ಯುಮೆಂಟರಿ ಬಿಡುಗಡೆಯ ಸುಳಿವು ನೀಡಿದ್ದರು.

ಈ ಡಾಕ್ಯುಮೆಂಟರಿ ಪಿಆರ್​ಕೆ ಪ್ರೊಡಕ್ಷನ್ಸ್ ಹಾಗೂ ಮಡ್ ಸ್ಕಿಪ್ಪರ್ಸ್ ಮೀಡಿಯಾಹೌಸ್‌ನಿಂದ ತಯಾರಾಗಿತ್ತು. ಆದರೆ, ಡಾಕ್ಯುಮೆಂಟರಿಯಲ್ಲಿ ಏನಿತ್ತು?. ಯಾಕಾಗಿ ಮಾಡಲಾಗಿತ್ತು ಎಂಬ ಬಗ್ಗೆ ಪುನೀತ್ ಆಗಲಿ, ಅವರ ತಂಡವಾಗಲಿ ಎಲ್ಲಿಯೂ ಮಾಹಿತಿ ಹಂಚಿಕೊಂಡಿರಲಿಲ್ಲ. ದುರಾದೃಷ್ಟವಶಾತ್ ಡಾಕ್ಯುಮೆಂಟರಿ ಬಿಡುಗಡೆಗೂ ಮುನ್ನ ಪುನೀತ್ ಅಗಲಿರುವುದು ನಿಜಕ್ಕೂ ಉತ್ತರ ಕನ್ನಡ ಜಿಲ್ಲೆಯ ಜನತೆಗೆ ಹಾಗೂ ಅವರ ಅಭಿಮಾನಿಗಳಿಗೆ ಆಘಾತ ನೀಡಿದೆ.

ಓದಿ:ಶ್ರೀ ಸಿದ್ದಾರೂಢ ಮಠದ ಪರಮ ಭಕ್ತ ಪುನೀತ್.. ಡಾ.ರಾಜ್ ಸಂಪ್ರದಾಯ ಮುಂದುವರೆಸಿದ್ದ ಅಪ್ಪು..

Last Updated : Oct 29, 2021, 7:25 PM IST

ABOUT THE AUTHOR

...view details