ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ಕನ್ನಡ ಚಿತ್ರರಂಗ ಕಂಡ ಬಹಳ ಸರಳ ಸಜ್ಜನಿಕೆಯ ನಟ. ತಾನೊಬ್ಬ ಸ್ಟಾರ್ ನಟ ಎಂಬ ಅಹಂ ಇಲ್ಲದೇ ತೆರೆ ಮುಂದೆ, ತೆರೆ ಹಿಂದೆಯೂ ನಿಜವಾದ ನಾಯಕ ನಟನಾಗಿ ಇರ್ತಾ ಇದ್ದ ನಟ. ಬದುಕಿನಲ್ಲಿ ಒಮ್ಮೆಯಾದರೂ ಪುನೀತ್ರನ್ನು ಭೇಟಿಯಾದರೆ ಸಾಕು, ಅವರ ಮಾತು ಹಾಗೂ ನಗುವಿಗೆ ಬೋಲ್ಡ್ ಆಗದವರೇ ಇಲ್ಲ.ಇಂತಹ ಸರಳ ವ್ಯಕ್ತಿತ್ವದ ವ್ಯಕ್ತಿ ಇನ್ನು ನೆನಪು ಮಾತ್ರ.
ಇಂದು ಹೃದಯಘಾತದಿಂದ ಬಾರದ ಲೋಕಕ್ಕೆ ಪಯಣ ಬೆಳಸಿರೋ ಪುನೀತ್ ರಾಜ್ಕುಮಾರ್, ಕನ್ನಡ ಚಿತ್ರರಂಗದಲ್ಲಿ ಸ್ಟಾರ್ ನಟರ ಪೈಕಿ ಮೊದಲನೇ ಸ್ಥಾನದಲ್ಲಿದ್ದ ಸ್ಟಾರ್ ಹೀರೋ. ಬಾಲ್ಯದಿಂದಲೇ ಹಲವು ಸೂಪರ್ ಹಿಟ್ ಸಿನಿಮಾಗಳನ್ನ ಕೊಟ್ಟಿರುವ ಪವರ್ ಸ್ಟಾರ್ , ನಿರ್ಮಾಪಕರ ಪಾಲಿಗೆ ಚಿನ್ನದ ಮೊಟ್ಟೆ ಇಡುವ ನಟ.
ಪುನೀತ್ ಸಿನಿಮಾ ಮಾಡಿದ್ರೆ, ಪ್ರಾಫಿಟ್ ಅನ್ನೋದು ನಿರ್ಮಾಪಕರ ಮಾತು. ಹೀಗಾಗಿ, ಪವರ್ ಸ್ಟಾರ್ ಜೊತೆ ಸಿನಿಮಾ ಮಾಡೋದಿಕ್ಕೆ ಸಾಕಷ್ಟು ಜನ ನಿರ್ಮಾಪಕರು ಕ್ಯೂನಲ್ಲಿದ್ದರು. ಹಾಗಾದ್ರೆ ಪುನೀತ್ ರಾಜ್ಕುಮಾರ್ ಇನ್ನೂ ಎಷ್ಟು ಸಿನೆಮಾಗಳಲ್ಲಿ ಅಭಿನಯಿಸಬೇಕಿತ್ತು ಎಂಬುದನ್ನು ಹೇಳುತ್ತೇವೆ.
ಯುವರತ್ನ ಸಿನಿಮಾ ಯಶಸ್ಸಿನ ಬಳಿಕ ಪುನೀತ್ ರಾಜ್ಕುಮಾರ್ ಅಭಿನಯಿಸುತ್ತಿದ್ದ ಹೈ ವೋಲ್ಟೆಜ್ ಸಿನಿಮಾ ಜೇಮ್ಸ್. ನಿರ್ದೇಶಕ ಚೇತನ್ ಕುಮಾರ್ ನಿರ್ದೇಶನದ ಈ ಸಿನೆಮಾ ಬಹುತೇಕ ಚಿತ್ರೀಕರಣ ಮುಗಿಸಿ ಹಾಡಿನ ಚಿತ್ರೀಕರಣ ಮಾತ್ರ ಬಾಕಿ ಉಳಿದಿತ್ತು. ಪವರ್ ಸ್ಟಾರ್ ಅಭಿಮಾನಿಯಾಗಿರೋ ಕಿಶೋರ್ ಪತ್ತಿಕೊಂಡ ಈ ಸಿನಿಮಾವನ್ನ ನಿರ್ಮಾಣ ಮಾಡಿದ್ದರು. ಈ ಚಿತ್ರದಲ್ಲಿ ಪುನೀತ್ ರಾಜ್ಕುಮಾರ್ ಸಖತ್ ರಾ ಲುಕ್ನಲ್ಲಿ ಕಾಣಿಸಿಕೊಂಡಿದ್ದರು. ಚಿತ್ರದ ಒಂದು ಹಾಡಿನ ಚಿತ್ರೀಕರಣವನ್ನೂ ಮುಗಿಸಿದ್ದರು.
ಈ ಸಿನಿಮಾ ಬಳಿಕ ಹೊಂಬಾಳೆ ಫಿಲ್ಮ್ ಸಂಸ್ಥೆಯಡಿ ದ್ವಿತ್ವ ಸಿನೆಮಾ ನಿರ್ಮಾಣವಾಗಬೇಕಿತ್ತು. ಸೈಕಲಾಜಿಕಲ್ ಕಥಾಹಂದರ ಹೊಂದಿದ್ದ ಲೂಸಿಯಾ ಚಿತ್ರಕ್ಕೆ ನಿರ್ದೇಶನ ಮಾಡಿದ್ದ ಪವನ್ ಕುಮಾರ್ ಈ ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿದ್ದರು. ಪವರ್ ಸ್ಟಾರ್ಗೆ ಜೋಡಿಯಾಗಿ, ತ್ರಿಷಾ ನಾಯಕಿಯಾಗಿ ಮತ್ತೆ ಕನ್ನಡಕ್ಕೆ ಬರ್ತಾ ಇದ್ದರು. ಬಹು ಕೋಟಿ ವೆಚ್ಚದಲ್ಲಿ ಈ ಸಿನಿಮಾವನ್ನ ನಿರ್ಮಾಪಕ ವಿಜಯ್ ಕಿರಗಂದೂರ್ ನಿರ್ಮಾಣ ಮಾಡಬೇಕಿತ್ತು.