ಬೆಂಗಳೂರು: ಕೊರೊನಾ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆ ಕಂಡುಬಂದ ಹಿನ್ನೆಲೆ ಶೇ.100ರಷ್ಟು ಆಸನ ಭರ್ತಿಗೆ ಸರ್ಕಾರ ಅನುಮತಿ ನೀಡಿದೆ. ಸ್ಯಾಂಡಲ್ ವುಡ್ ನಲ್ಲಿ ಬಿಗ್ ಬಜೆಟ್ ಸಿನಿಮಾಗಳು ತೆರೆಗೆ ಬರಲು ಸಿದ್ಧವಾಗಿದ್ದು, ಈ ನಡುವೆಯೇ ಮತ್ತೆ ಪೈರಸಿ(Piracy) ಭೂತ ಕಾಡಲು ಆರಂಭಿಸಿದೆ.
ಸ್ಯಾಂಡಲ್ವುಡ್ ಕೋವಿಡ್ ಹೊಡೆತದಿಂದ ನಿಧಾನವಾಗಿ ಸುಧಾರಿಸಿಕೊಳ್ಳುತ್ತಿರುವಾಗಲೇ ಕಿಡಿಗೇಡಿಗಳು ಹೊಸದಾಗಿ ಬಿಡುಗಡೆಯಾದ ಕನ್ನಡ ಚಿತ್ರಗಳನ್ನು ಪೈರಸಿ ಮಾಡಿ, ಟೆಲಿಗ್ರಾಂ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಲಿಂಕ್ ಹರಿಬಿಡುತ್ತಿದ್ದಾರೆ. ಈ ಸಂಬಂಧ ಶಾರ್ದೂಲ ಸಿನಿಮಾ ನಿರ್ಮಾಪಕರು ಸೈಬರ್ ಕ್ರೈಂ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ಕೊರೊನಾ ಹೊಡೆತಕ್ಕೆ ಸಿಲುಕಿ ನಲುಗಿದ್ದ ಕನ್ನಡ ಚಿತ್ರೋದ್ಯಮ ಒಂದೂವರೆ ವರ್ಷದಿಂದ ಸಾಕಷ್ಟು ಸವಾಲುಗಳನ್ನ ಎದುರಿಸಿತ್ತು. ಕೊರೊನಾ ಎರಡನೇ ಅಲೆ ನಂತರ ಸಿನಿರಂಗ ಸ್ವಲ್ಪ ಚೇತರಿಸಿಕೊಂಡು, ಬಿಡುಗಡೆಗೆ ಸಿದ್ಧವಾಗಿದ್ದ ಹಲವು ಹೊಸ ಸಿನಿಮಾಗಳನ್ನ ರಿಲೀಸ್ ಮಾಡಿತ್ತು. ನಟ ಅಜಯ್ ರಾವ್ ಅಭಿನಯದ 'ಕೃಷ್ಣ ಟಾಕೀಸ್', ಲೂಸ್ ಮಾದ ಯೋಗಿ ಅಭಿನಯದ 'ಲಂಕೆ', ನಟ ಚೇತನ್ ಚಂದ್ರ ಅಭಿನಯದ 'ಶಾರ್ದೂಲ' ಹಾಗೂ ಸೂರಜ್ ಗೌಡ ಹಾಗೂ ಡಾ. ರಾಜ್ ಮೊಮ್ಮಗಳು ಧನ್ಯಾ ರಾಮ್ ಕುಮಾರ್ ಅಭಿನಯದ 'ನಿನ್ನ ಸನಿಹಕೆ' ಸಿನಿಮಾಗಳು ತೆರೆಕಂಡಿದ್ದವು. ಆದರೆ ಕಳೆದ ಒಂದೂವರೆ ತಿಂಗಳಿಂದ ರಿಲೀಸ್ ಆದ ಅಷ್ಟು ಕನ್ನಡ ಸಿನಿಮಾಗಳು ಪೈರಸಿಯಾಗಿವೆ ಎಂಬ ಮಾತುಗಳು ಕೇಳಿಬರುತ್ತಿವೆ.