ಶಿವತೇಜಸ್ ನಿರ್ದೇಶನದ ಹೊಸ ಚಿತ್ರದಲ್ಲಿ ಡಾರ್ಲಿಂಗ್ ಕೃಷ್ಣ ನಟಿಸುತ್ತಿರುವ ಸುದ್ದಿ ಗೊತ್ತೇ ಇದೆ. ಈಗಾಗಲೇ, ಧರ್ಮಸ್ಥಳದ ಶ್ರೀ ಮಂಜುನಾಥೇಶ್ವರ ದೇವಸ್ಥಾನದಲ್ಲಿ ಚಿತ್ರದ ಸ್ಕ್ರಿಪ್ಟ್ ಪೂಜೆ ಸಹ ಆಗಿದೆ. ಇಂದು ಚಿತ್ರದ ಶೀರ್ಷಿಕೆ ಅಧಿಕೃತವಾಗಿ ಬಿಡುಗಡೆಯಾಗುತ್ತಿದ್ದು, ಈ ಮಧ್ಯೆ ಚಿತ್ರಕ್ಕೆ ನಾಯಕಿಯರ ಆಯ್ಕೆ ಆಗಿದೆ.
ಕೃಷ್ಣ ನಿರ್ದೇಶನದ ಈ ಚಿತ್ರದಲ್ಲಿ ಇಬ್ಬರು ನಾಯಕಿಯರಿದ್ದು, ನಿಶ್ವಿಕಾ ನಾಯ್ಡು ಮತ್ತು 'ಜೊತೆಜೊತೆಯಲಿ' ಖ್ಯಾತಿಯ ಮೇಘಾ ಶೆಟ್ಟಿ ಆಯ್ಕೆಯಾಗಿದ್ದಾರೆ. ಈ ಪೈಕಿ ನಿಶ್ವಿಕಾ ಈಗಾಗಲೇ ಹಲವು ಚಿತ್ರಗಳಲ್ಲಿ ನಟಿಸಿದ್ದು, ಮೇಘಾಗೆ ಇದು 'ತ್ರಿಬಲ್ ರೈಡಿಂಗ್' ನಂತರ ಎರಡನೆಯ ಚಿತ್ರ.
'ನಾನಿ' ಖ್ಯಾತಿಯ ಸುಮಂತ್ ಕ್ರಾಂತಿ ಈ ಚಿತ್ರವನ್ನು ನಿರ್ಮಿಸುತ್ತಿದ್ದು, ಇದು ಅವರ ಎರಡನೆಯ ಚಿತ್ರ. ಇದಕ್ಕೂ ಮುನ್ನ, ಪ್ರಜ್ವಲ್ ಅಭಿನಯದ ಹೊಸ ಚಿತ್ರದ ನಿರ್ಮಾಣಕ್ಕೂ ಅವರು ಕೈಹಾಕಿದ್ದು, ಆ ಚಿತ್ರ ಮುಂದಿನ ವರ್ಷ ಪ್ರಾರಂಭವಾಗಲಿದೆ. ಅದಕ್ಕೂ ಮುನ್ನವೇ ಕೃಷ್ಣ ಅಭಿನಯದ ಈ ಚಿತ್ರ ಸೆಟ್ಟೇರಿದರೆ ಆಶ್ಚರ್ಯವಿಲ್ಲ.
ಈ ಚಿತ್ರದ ಶೀರ್ಷಿಕೆಯನ್ನು ಐಪಿಎಸ್ ಅಧಿಕಾರಿ ರವಿ ಡಿ. ಚನ್ನಣ್ಣನವರ್ ಇಂದು ಸಂಜೆ ಅಧಿಕೃತವಾಗಿ ಬಿಡುಗಡೆ ಮಾಡಲಿದ್ದಾರೆ. ಈ ಚಿತ್ರದಲ್ಲಿ ರಂಗಾಯಣ ರಘು, ಅರುಣಾ ಬಾಲರಾಜ್, ಗಿರಿ, ತಬಲಾ ನಾಣಿ ಮುಂತಾದವರು ನಟಿಸುತ್ತಿದ್ದಾರೆ. ಅರ್ಜುನ್ ಜನ್ಯ ಸಂಗೀತ ಈ ಚಿತ್ರಕ್ಕಿದೆ.
ಇದನ್ನೂ ಓದಿ:ಪವರ್ ಸ್ಟಾರ್ 'ಜೇಮ್ಸ್' ಚಿತ್ರದ ಸ್ಯಾಟ್ಲೈಟ್ ಹಕ್ಕು 15 ಕೋಟಿಗೆ ಮಾರಾಟ?