ಕನ್ನಡ ಚಿತ್ರರಂಗದಲ್ಲಿ ಬಾಲ ನಟನಾಗಿ ಭೇಷ್ ಅನ್ನಿಸಿಕೊಂಡು ‘ಮುತ್ತಿನ ಹಾರ’ ಸಿನಿಮಾದಿಂದ ಕಾಲಿಟ್ಟ ಮಾಸ್ಟರ್ ಆನಂದ್ ಇಂದು ಬೆಳೆದು ದೊಡ್ಡವರಾದರೂ ‘ಮಾಸ್ಟರ್’ಅಂತಲೇ ಫೇಮಸ್. ಅಂದು ನಟನಾಗಿ ಹೆಸರು ಮಾಡಿದ್ದ ಇವರು ಇಂದು ಪೋಷಕ ನಟ, ನಿರೂಪಕ, ಕಿರು ತೆರೆಯಲ್ಲಿ ನಿರ್ದೇಶಕ ಹಾಗೂ ನಿರ್ಮಾಪಕನಾಗಿ ಕಲಾ ಸೇವೆ ಮಾಡುತ್ತಿದ್ದಾರೆ.
ಮಾಸ್ಟರ್ ಆನಂದ್ ಅವರ ಎರಡನೇ ಸಿನಿಮಾ ‘ನಾನು ಕೋಳಿಕೆ ರಂಗ’ ಸಿದ್ದವಾಗಿದೆ. ಲಾಕ್‌ಡೌನ್ ಮುಗಿದ ನಂತರ ಪ್ರಚಾರ ಕಾರ್ಯ ಆರಂಭ ಆಗಲಿದೆ. ಮಾಸ್ಟರ್ ಆನಂದ್ ಇದಕ್ಕೂ ಮುಂಚೆ ‘ಹಗಲು ಕನಸು’ ದಿನೇಶ್ ಬಾಬು ನಿರ್ದೇಶನದಲ್ಲಿ ನಾಯಕನ ಪಾತ್ರಕ್ಕೆ ಬಡ್ತಿ ಪಡೆದಿದ್ದರು.
ಕನ್ನಡದಲ್ಲಿ ‘ನಾನು ಕೋಳಿಕೆ ರಂಗ’ ಅಂದ್ರೆ ಜ್ಞಾಪಕಕ್ಕೆ ಬರುವುದು ನಾಟಕಕಾರ, ಕವಿ ಟಿ ಪಿ ಕೈಲಾಸಂ ಅವರ ರಚನೆಯ ನಾ ಕೋಳಿಕೆ ರಂಗ.. ವಿಶಿಷ್ಟ ಗೀತೆ. ಸುಗಮ ಸಂಗೀತ ಕ್ಷೇತ್ರದಲ್ಲಿ ಈ ಹಾಡನ್ನು ಮೈಸೂರು ಅನಂತಸ್ವಾಮಿ ಅವರು ಜನಪ್ರಿಯತೆಗೊಳಿಸಿದ್ದರು. ಕೆಲವು ಸಾಲುಗಳನ್ನು ‘ತಿಪ್ಪಾರಳ್ಳಿ ತರಲೆಗಳು’ ಕನ್ನಡ ಸಿನಿಮಾದಲ್ಲೂ ಸಹ ಉಪಯೋಗ ಮಾಡಲಾಗಿತ್ತು.
‘ನಾನು ಕೋಳಿಕೆ ರಂಗ’ ಸಿನಿಮಾದಲ್ಲಿ ಮಾಸ್ಟರ್ ಆನಂದ್ ಒಂದು ಕೋಳಿಯ ಜೊತೆಯಲ್ಲಿ ಬಹುತೇಕ ಕಾಣಿಸಿಕೊಳ್ಳುತ್ತಾರೆ. ಈ ಕೋಳಿಯನ್ನು ಬಲಿ ಕೊಡಬೇಕು ಎಂದು ಮಂತ್ರವಾದಿ ಪಾತ್ರದಾರಿ ರಾಕ್‌ಲೈನ್ ಸುಧಾಕರ್ ಹೊಂಚು ಹಾಕುತ್ತಾ ಇರುತ್ತಾರೆ. ಇದರ ಜೊತೆಗೆ ಪ್ರೀತಿ ಸಹ ಚಿತ್ರಕಥೆಯಲ್ಲಿ ಇಣುಕುತ್ತದೆ. ರಾಜೇಶ್ವರಿ ಈ ಚಿತ್ರದಲ್ಲಿ ಕಥಾ ನಾಯಕಿ ಹಾಗೂ ಹಿರಿಯ ನಟಿ ಭವ್ಯ ಈ ಚಿತ್ರದಲ್ಲಿ ಮಾಸ್ಟರ್ ಆನಂದ್ ತಾಯಿ ಪಾತ್ರದಲ್ಲಿದ್ದಾರೆ. ಹೊನ್ನವಳ್ಳಿ ಕೃಷ್ಣ, ಬೀರಾದಾರ್, ಗಡ್ಡಪ್ಪ ಹಾಗೂ ಇತರರು ತಾರಾಗಣದಲ್ಲಿದ್ದಾರೆ.
ಮಹೇಶ್ ಗವಡ್ ಈ ಚಿತ್ರಕ್ಕೆ ಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಈ ಚಿತ್ರದ ಶೀರ್ಷಿಕೆ ಗೀತೆಗೆ ಪವರ್‌ಸ್ಟಾರ್ ಪುನೀತ್ ರಾಜಕುಮಾರ್ ಧ್ವನಿ ಆಗಿದ್ದಾರೆ. ಮಾಸ್ಟರ್ ಆನಂದ್ ಈ ಹಾಡಿಗೆ ಸಿನಿಮಾದಲ್ಲಿ ಕುಣಿದು ಕುಪ್ಪಳಿಸಿದ್ದಾರೆ.