ಟ್ರೈಲರ್ ಹಾಗೂ ಅದ್ಧೂರಿ ಮೇಕಿಂಗ್ನಿಂದಲೇ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಹವಾ ಸೃಷ್ಟಿಸಿದ್ದ ಶ್ರೀಮುರುಳಿ ಅಭಿನಯದ ಮದಗಜ ಸಿನಿಮಾ, ಬಿಡುಗಡೆ ಆಗಿ ಸಕ್ಸಸ್ ಆಗುವುದರ ಜೊತೆಗೆ ಬಾಕ್ಸ್ ಆಫೀಸ್‌ನಲ್ಲಿ ಕೊಳ್ಳೆ ಹೊಡೆದಿದೆ. ಎಸ್ ಮಹೇಶ್ ಕುಮಾರ್ ನಿರ್ದೇಶನದ ಹಾಗೂ ಉಮಾಪತಿ ಶ್ರೀನಿವಾಸ್ ಗೌಡ ನಿರ್ಮಾಣದ ಮದಗಜ ಸಿನಿಮಾ ಡಿಸೆಂಬರ್ 3ರಂದು ಬಿಡುಗಡೆಯಾಗಿ 900ಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ ಪ್ರದರ್ಶನಗೊಂಡಿತ್ತು. ಆ್ಯಕ್ಷನ್ ಜೊತೆಗೆ ತಾಯಿ ಸೆಂಟಿಮೆಂಟ್ ಇಟ್ಟುಕೊಂಡು ಬಂದ ಮದಗಜ ಸಿನಿಮಾ ಮೂಲಕ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡಗೆ ಬಂಪರ್ ಲಾಟರಿ ಹೊಡೆದಿದೆ.
ಮದಗಜ ಸಿನಿಮಾ ಬಿಡುಗಡೆಗೆ ಮೊದಲೇ ಹಿಂದಿ ಡಬ್ಬಿಂಗ್ ರೈಟ್ಸ್ 8 ಕೋಟಿ ರೂ. ಹಾಗೂ ಟಿವಿ ರೈಟ್ಸ್ಗೆ 6 ಕೋಟಿ ರೂ.ಗೆ ಮಾರಾಟ ಆಗುವ ಮೂಲಕ ನಿರ್ಮಾಪಕರ ಜೇಬು ತುಂಬಿಸಿತ್ತು. ಇದೀಗ ಮದಗಜ ಸಿನಿಮಾ ಬಿಡುಗಡೆ ಆಗಿ ಬಾಕ್ಸ್ ಆಫೀಸ್‌ನಲ್ಲಿ ಒಳ್ಳೆ ಗಳಿಕೆ ಮಾಡಿದೆ. ಮೂರು ದಿನಕ್ಕೆ ಮದಗಜ ಸಿನಿಮಾ ಬರೋಬ್ಬರಿ 20.23 ಕೋಟಿ ರೂ. ಕಲೆಕ್ಷನ್ ಮಾಡುವ ಮೂಲಕ ಬಾಕ್ಸ್ ಅಫೀಸ್‌ನಲ್ಲಿ ದಾಖಲೆ ಬರೆದಿದೆ.
ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಮದಗಜ ಸಿನಿಮಾದ ಮೂರು ದಿನ ಕಲೆಕ್ಷನ್ ಅನ್ನು ಘೋಷಣೆ ಮಾಡುವ ಮೂಲಕ, ಚಿತ್ರರಂಗದಲ್ಲಿ ಭರವಸೆ ಮೂಡಿಸಿದ್ದಾರೆ. ಸಿಂಗಲ್ ಸ್ಕ್ರೀನ್ ಹಾಗೂ ಮಲ್ಟಿಪೆಕ್ಸ್ ಚಿತ್ರಮಂದಿರಗಳಲ್ಲಿ, ಮೂರು ದಿನಕ್ಕೆ ಮದಗಜ ಸಿನಿಮಾ 7,400 ಶೋಗಳಲ್ಲಿ ಪ್ರದರ್ಶನಗೊಂಡಿದೆ. ಮೊದಲ ದಿನವೇ 7.82 ಕೋಟಿ ರೂ. ಗಳಿಸಿದೆ. ಇನ್ನು ಎರಡನೇ ದಿನ 5.64 ಕೋಟಿ ರೂ. ಕಲೆಕ್ಷನ್ ಮಾಡಿದೆ ಅಂತ ನಿರ್ದೇಶಕ ಮಹೇಶ್ ಕುಮಾರ್ ತಿಳಿಸಿದ್ದಾರೆ.