ಕನ್ನಡತಿ ಲಕ್ಷ್ಮಿ ರಾಯ್ ತಮ್ಮ ತವರು ಚಿತ್ರರಂಗಕ್ಕೆ ಕಂಬ್ಯಾಕ್ ಮಾಡುತ್ತಿರುವ ಝಾನ್ಸಿ ಚಿತ್ರದ ಶೂಟಿಂಗ್ ಬಿರುಸಿನಿಂದ ಸಾಗುತ್ತಿದೆ.
ಸಾಹಸಮಯ ಚಿತ್ರ ಝಾನ್ಸಿಯ ಚಿತ್ರೀಕರಣ ಇತ್ತೀಚೆಗೆ ಮುಂಬೈನಲ್ಲಿ ನಡೆದಿದ್ದು, ಈ ವೇಳೆ ಅದ್ಬುತ ಥ್ರಿಲ್ಲರ್ ಸನ್ನಿವೇಶ ಚಿತ್ರೀಕರಿಸಲಾಗಿದೆ.
ಝಾನ್ಸಿ ಚಿತ್ರಕ್ಕೆ 35 ದಿನಗಳ ಕಾಲ ಶೂಟಿಂಗ್ ನಡೆದಿದ್ದು, ಚಿತ್ರದಲ್ಲಿ ಅದರಲ್ಲಿ ನಾಲ್ಕು ಸಾಹಸ ಸನ್ನಿವೇಶ ಹಾಗೂ ಒಂದು ಚೇಸಿಂಗ್ ಸನ್ನಿವೇಶವನ್ನು ಒಳಗೊಂಡಿದೆ. ಈ ಚಿತ್ರಕ್ಕಾಗಿ ನಟಿ ಲಕ್ಷ್ಮಿ ರಾಯ್ ಮಾರ್ಷಲ್ ಆರ್ಟ್ ಸಹ ಕಲಿತಿದ್ದಾರೆ.
ಹಿರಿಯ ಸಾಹಸ ನಿರ್ದೇಶಕ ಥ್ರಿಲ್ಲರ್ ಮಂಜು ಅವರ 500 ನೇ ಸಿನಿಮಾ ಇದಾಗಿದ್ದು, ಸಂಗೀತ ನಿರ್ದೇಶಕ ಎಂ ಎನ್ ಕೃಪಾಕರ್ ಅವರಿಗೆ ಇದು 50ನೇ ಚಿತ್ರ ಎನ್ನುವುದು ಮತ್ತೊಂದು ವಿಶೇಷ.
ನಿರ್ದೇಶಕ ಪಿ.ವಿ.ಎಸ್ ಗುರುಪ್ರಸಾದ್ ಝಾನ್ಸಿ ಆಗಿ ಖಡಕ್ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಲಕ್ಷ್ಮಿ ರಾಯ್ ಅನ್ನು ತೆರೆಯ ಮೇಲೆ ತರುತ್ತಿದ್ದಾರೆ. ಈ ಮೊದಲು 'ಮರ್ಯಾದ ರಾಮಣ್ಣ' ಸಿನಿಮಾ ಮಾಡಿದ್ದ ಗುರುಪ್ರಸಾದ್ ಇದೀಗ ಆ್ಯಕ್ಷನ್ ಸಿನಿಮಾನ್ನು ನೋಡುಗರ ಮುಂದೆ ತರುತ್ತಿದ್ದಾರೆ. ಈ ಚಿತ್ರಕ್ಕೆ ನಿರ್ದೇಶಕರೇ ಕಥೆ, ಚಿತ್ರಕಥೆಯ ಜೊತೆಗೆ ಸಂಭಾಷಣೆ ಬರೆದಿದ್ದಾರೆ.
ಒಂದು ಹಾಡಿಗೆ ನೃತ್ಯ ನಿರ್ದೇಶಕ ಧನ್ ಕುಮಾರ್ ಕೊರಿಯೋಗ್ರಫಿ ಮಾಡಿದ್ದಾರೆ. ಮುಖೇಶ್ ತಿವಾರಿ, ವೀರ್ ಹನಿಫ್, ರವಿ ಕಾಳೆ ನೆಗೆಟಿವ್ ರೋಲ್ನಲ್ಲಿ ನಟಿಸಿದ್ದು, ಝಾನ್ಸಿ ಚಿತ್ರಕ್ಕೆ ವೀರೇಶ್ ಛಾಯಾಗ್ರಹಣ ಮಾಡಿದ್ದಾರೆ.
ಡ್ರಗ್ಸ್, ಲ್ಯಾಂಡ್ ಮಾಫಿಯಾ ಹಾಗೂ ಇನ್ನಿತರ ವಿಚಾರಗಳನ್ನು ಒಳಗೊಂಡ ‘ಝಾನ್ಸಿ’ ಮಾಸ್ ಹಾಗೂ ಕುಟುಂಬ ಸಮೇತ ನೋಡುವಂತಹ ಚಿತ್ರ ಎಂದು ನಿರ್ದೇಶಕರು ಹೇಳಿದ್ದಾರೆ.
ಭವಾನಿ ಎಂಟರ್ಟೇನ್ಮೆಂಟ್ ಅಡಿ ಮುಂಬಯಿ ಮೂಲದ ರಾಜೇಶ್ ಕುಮಾರ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಬಸವರಾಜ್ ಸಂಕಲನದ ಜವಾಬ್ದಾರಿ ವಹಿಸಿಕೊಂಡಿದ್ದಾರೆ.