ಸುದೀಪ್ ಅಭಿನಯದ 'ಕೋಟಿಗೊಬ್ಬ 3' ಚಿತ್ರವು ದಸರಾ ಹಬ್ಬದ ಪ್ರಯುಕ್ತ ಅಕ್ಟೋಬರ್ 14ಕ್ಕೆ ಬಿಡುಗಡೆಯಾಗುತ್ತಿರುವುದು ಗೊತ್ತೇ ಇದೆ. ಚಿತ್ರ ಇನ್ನೂ ಸೆನ್ಸಾರ್ ಆಗಿಲ್ಲ. ಮೇಲಾಗಿ ಪ್ರಮೋಷನ್ ಕೂಡ ಶುರುವಾಗಿಲ್ಲ. ಬಿಡುಗಡೆಗೆ 10 ದಿನಗಳು ಮಾತ್ರ ಇದೆ. ಇನ್ನೂ ಪ್ರಚಾರ ಶುರುವಾಗಿಲ್ಲ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿದ್ದು, ಸೋಷಿಯಲ್ ಮೀಡಿಯಾದಲ್ಲಿ ತಾವೇ ಚಿತ್ರದ ಪೋಸ್ಟರ್ ಮತ್ತು ಫೋಟೊ ಬಳಸಿಕೊಂಡು ಪ್ರಚಾರಕ್ಕಿಳಿದಿದ್ದಾರೆ.
ಇಷ್ಟಕ್ಕೂ ಯಾಕೆ ಪ್ರಚಾರ ಶುರುವಾಗಿಲ್ಲ ಎಂದರೆ ಪಕ್ಷಮಾಸದ ಕಾರಣ ನೀಡುತ್ತಾರೆ ನಿರ್ಮಾಪಕ ಸೂರಪ್ಪ ಬಾಬು ಬೆಂಬಲಿಗರು. ಅ.6ಕ್ಕೆ ಪಕ್ಷಮಾಸ ಅಧಿಕೃತವಾಗಿ ಮುಗಿಯಲಿದೆ. ಸೆ.7ರಂದು ಪ್ರಚಾರ ಕೆಲಸ ಶುರುವಾಗಲಿದ್ದು, ಅಂದೇ ಸಂಜೆ ಯೂಟ್ಯೂಬ್ನ ಆನಂದ್ ಆಡಿಯೋ ಚಾನಲ್ನಲ್ಲಿ ಚಿತ್ರದ ಟ್ರೇಲರ್ ಬಿಡುಗಡೆಯಾಗಲಿದೆ. ಅದಾಗಿ ಮೂರನೇ ದಿನಕ್ಕೆ ಚಿತ್ರದ ಪ್ರೀ-ರಿಲೀಸ್ ಇವೆಂಟ್ ನಡೆಯಲಿದೆ. ಶ್ರೇಯಸ್ ಮೀಡಿಯಾ ಈ ಕಾರ್ಯಕ್ರಮವನ್ನು ಆಯೋಜಿಸುತ್ತಿದ್ದು, ಅಂದು ಸುದೀಪ್ ಮತ್ತು ಚಿತ್ರತಂಡದವರು ಇದರಲ್ಲಿ ಭಾಗವಹಿಸಿ, ಚಿತ್ರದ ಬಗ್ಗೆ ಮೊದಲ ಬಾರಿಗೆ ಮಾತನಾಡಲಿದ್ದಾರೆ.