ಬೆಂಗಳೂರು: ಭಾರತೀಯ ಸಿನಿ ಚಿತ್ರರಂಗ ಚಂದನವನದತ್ತ ತಿರುಗಿ ನೋಡುವಂತೆ ಮಾಡಿದ್ದು ಕೆಜಿಎಫ್. ಅದರ ಮುಂದಿನ ಭಾಗದ ಕೆಜಿಎಫ್ ಚಾಪ್ಟರ್-2 ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಯೂಟ್ಯೂಬ್ನಲ್ಲಿ ದಾಖಲೆ ಬರೆಯುತ್ತಿದೆ. ರಾಕಿಂಗ್ ಸ್ಟಾರ್ ಯಶ್ ಅವರ ಜನ್ಮದಿನಕ್ಕೂ ಮೊದಲೇ ಈ ಟೀಸರ್ ಬಿಡುಗಡೆಯಾಗಿದೆ.
ಇದನ್ನೂ ಓದಿ:ಬಿಡುಗಡೆಗೆ ಮುನ್ನವೇ ಲೀಕ್ : ಬಹುನಿರೀಕ್ಷಿತ ಕೆಜಿಎಫ್-2 ಟೀಸರ್ ರಿಲೀಸ್ ಮಾಡಿದ ಚಿತ್ರತಂಡ
ಕೆಜಿಎಫ್-2 ಕಡಿಮೆ ಅವಧಿಯಲ್ಲಿ ಅತಿಹೆಚ್ಚು ಲೈಕ್ಸ್ ಪಡೆದ ಭಾರತ ಚಿತ್ರರಂಗದ ಮೊದಲ ಟೀಸರ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ನವೆಂಬರ್ 14 ರಂದು ಬಿಡುಗಡೆಯಾದ ದಳಪತಿ ವಿಜಯ್ ನಟನೆಯ 'ಮಾಸ್ಟರ್' ಸಿನಿಮಾದ ಟೀಸರ್ 16 ಗಂಟೆಗಳಲ್ಲಿ 16 ಲಕ್ಷಕ್ಕೂ ಹೆಚ್ಚು ಲೈಕ್ಸ್ ಪಡೆದಿತ್ತು. ಈವರೆಗೂ ಆ ಟೀಸರ್ 26 ಲಕ್ಷ ಲೈಕ್ಸ್ ಪಡೆದುಕೊಂಡಿದೆ.
ಕೆಜಿಎಫ್-2 ಟೀಸರ್ ಬಿಡುಗಡೆಯಾದ 18 ಗಂಟೆಗಳಲ್ಲಿ 34 ಲಕ್ಷಕ್ಕೂ ಅಧಿಕ ಲೈಕ್ಸ್ ಪಡೆದು ಮಾಸ್ಟರ್ ದಾಖಲೆಯನ್ನು ಅಳಿಸಿ ಹಾಕಿದೆ. ಕೆಜಿಎಫ್-2 ನಂತರ ಮಾಸ್ಟರ್ (26 ಲಕ್ಷ ಲೈಕ್ಸ್), ಜೂ.ಎನ್ಟಿರ್ ಮತ್ತು ರಾಮ್ಚರಣ್ ನಟನೆಯ ಆರ್ಆರ್ಆರ್ ಟೀಸರ್ (12 ಲಕ್ಷ ಲೈಕ್ಸ್), ಮಹೇಶ್ ಬಾಬು ನಟನೆಯ ಸರ್ಕಾರು ವಾರಿ ಪಾಟ, ವಿಜಯ್ ನಟನೆಯ ಮತ್ತೊಂದು ಸಿನಿಮಾ ಮಾರ್ಸೆಲ್ ಕ್ರಮವಾಗಿ ನಂತರದ ಸ್ಥಾನಗಳಲ್ಲಿವೆ.
ಅಲ್ಲದೆ, ಬಿಡುಗಡೆಯಾದ 18 ಗಂಟೆಗಳಲ್ಲಿ ಟೀಸರ್ ಅನ್ನು 5.5 ಕೋಟಿಗೂ ಅಧಿಕ ಜನರು ವೀಕ್ಷಿಸಿದ್ದು, ಭಾರತೀಯ ಚಿತ್ರರಂಗದಲ್ಲೇ ಇದೇ ಮೊದಲ ಬಾರಿಗೆ ಕಡಿಮೆ ಅವಧಿಯಲ್ಲಿ ಇಷ್ಟು ಮಂದಿ ವೀಕ್ಷಿಸಿರುವ ದಾಖಲೆ ಬರೆದಿದೆ. ವೀಕ್ಷಕರ ಸಂಖ್ಯೆ ಇನ್ನೂ ಮುಂದುವರೆದಿದೆ. ಯೂಟ್ಯೂಬ್, ಟ್ವಿಟರ್, ಫೇಸ್ಬುಕ್, ಇನ್ಸ್ಟಾಗ್ರಾಂ ಈಗಲೂ ಚಿತ್ರದ ಟೀಸರ್ ಟ್ರೆಂಡಿಂಗ್ನಲ್ಲಿದೆ.
ಯಶ್ ಜನ್ಮದಿನದ ಪ್ರಯುಕ್ತ ಜನವರಿ 8ರಂದು ಬೆಳಿಗ್ಗೆ 10:18ಕ್ಕೆ ಟೀಸರ್ ಬಿಡುಗಡೆ ಮಾಡುವುದಾಗಿ ಜ.4ರಂದು ಚಿತ್ರತಂಡ ಅಧಿಕೃತವಾಗಿ ಘೋಷಿಸಿತ್ತು. ಆದರೆ, ಕಿಡಿಗೇಡಿಗಳು ಟೀಸರ್ ಹ್ಯಾಕ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟರು.
ಇದರಿಂದಾಗಿ ಟೀಸರ್ ಬಿಡುಗಡೆಗೆ ಕಾತರದಿಂದ ಕಾಯುತ್ತಿದ್ದ ರಾಕಿ ಭಾಯ್ ಅಭಿಮಾನಿಗಳಿಗೆ ತೀವ್ರ ನಿರಾಸೆ ಉಂಟಾಯಿತು. ಟೀಸರ್ ಲೀಕ್ ಆದ ತಕ್ಷಣವೇ ಚಿತ್ರತಂಡ ಅಧಿಕೃತವಾಗಿ ಹೊಂಬಲೆ ಫಿಲ್ಮ್ಸ್ ಪೇಜ್ನಲ್ಲಿ ಗುರುವಾರ ರಾತ್ರಿ 9:29ಕ್ಕೆ ಟೀಸರ್ ಬಿಡುಗಡೆ ಮಾಡಿತು. ಟೀಸರ್ ಲೀಕ್ ಆದ ಕಾರಣ ಯಶ್ ಬೇಸರ ವ್ಯಕ್ತಪಡಿಸಿದ್ದರು.