ಕರ್ನಾಟಕ

karnataka

ETV Bharat / sitara

ಕನ್ನಡ ಚಿತ್ರಗಳ ಮೊಬೈಲ್ ಆ್ಯಪ್​​... 30 ರೂ.ಗೆ ಹೊಸ ಸಿನಿಮಾ ತೋರಿಸ್ತಾರೆ ಮುರಳಿ! - ಮುರಳಿ

ಚಿತ್ರಮಂದಿರಗಳ ಕೊರತೆ, ಪೈರಸಿ ಕಾಟದಿಂದ ಕೊಂಚ ನಿರಾಳತೆ ನೀಡಲಿದೆ ಈ ಕ್ಯೂ ಸ್ಟಾರ್ ಆ್ಯಪ್​. 120 ರೂ. ನೀಡಿ ತಿಂಗಳಿಗೆ 4 ಸಿನಿಮಾ ನೋಡಬಹುದು. ಶುಕ್ರವಾರ,ಶನಿವಾರ ಹಾಗೂ ಭಾನುವಾರ ಸಿನಿರಸಿಕರಿಗೆ ಭರ್ಜರಿ ರಸದೌತಣ ನೀಡಲಿದೆ.

ಮುರಳಿ

By

Published : Apr 4, 2019, 5:12 PM IST

ಕನ್ನಡ ಚಿತ್ರಗಳಿಗೆ ಥಿಯೇಟರ್​​ಗಳ ಕೊರತೆ ಕಾಡುತ್ತಿದೆ. ಚಿತ್ರಮಂದಿರಗಳ ಸಂಖ್ಯೆ ಕಡಿಮೆ, ಪರಭಾಷಾ ಸಿನಿಮಾಗಳ ಅಬ್ಬರದ ನಡುವೆ ಚಿಕ್ಕ ಬಜೆಟ್​ನ ಕನ್ನಡ ಚಿತ್ರಗಳು ತೆರೆಗೆಲೆಯಂತೆ ಹಾರಿ ಹೋಗಿ ಬಿಡುತ್ತವೆ.

ಬೆವರು ಸುರಿಸಿ ಮಾಡಿದ ಸಾಕಷ್ಟು ಚಿತ್ರಗಳು ಟಾಕೀಸ್​ಗಳಿಗೆ ಬರಲು ಹರಸಾಹಸ ಪಡುತ್ತವೆ. ಪ್ರೇಕ್ಷಕರನ್ನು ಮುಟ್ಟುವ ಮುಂಚೆಯೇ ಮರೆಯಾಗಿ ಹೋಗುತ್ತವೆ. ಈ ಸಮಸ್ಯೆಗೆ ಒಗ್ಗರಣೆ ಡಬ್ಬಿ ಖ್ಯಾತಿಯ ಮುರಳಿ ಹೊಸದಾರಿ ಕಂಡುಕೊಂಡಿದ್ದಾರೆ. 'ಕ್ಯೂ ಸ್ಟಾರ್' ಮೊಬೈಲ್​ ಆ್ಯಪ್ ಸಿದ್ಧಪಡಿಸಿರುವ ಅವರು, ಹೊಸ ಹೊಸ ಕನ್ನಡ ಸಿನಿಮಾಗಳನ್ನು ಮೊಬೈಲ್​ನಲ್ಲಿ ನೋಡುವ ಅವಕಾಶ ಮಾಡಿಕೊಡುತ್ತಿದ್ದಾರೆ. ಈ ಆ್ಯಪ್​ ಮೊಬೈಲ್​​ನಲ್ಲಿ ಅಳವಡಿಸಿಕೊಂಡು ಒಂದು ಕೋಡ್ ನಂಬರ್ ಹಾಕಿದರೆ ನಿಮಗೆ ಬೇಕಾದ ಕನ್ನಡ ಸಿನಿಮಾ ನೋಡಬಹುದು. ಇದರಿಂದ ಪೈರಸಿ ಸಾಧ್ಯವಿಲ್ಲ ಹಾಗೂ ದೊಡ್ಡ ಸ್ಕ್ರೀನ್ ಮೇಲೆ ಇದನ್ನು ಅಳವಡಿಸಲೂ ಸಹ ಸಾಧ್ಯವಿಲ್ಲ.

ಈ ಆ್ಯಪ್​​ಗೆ ಈಗಾಗಲೇ 3,86,000 ಜನರು ನೋಂದಣಿ ಮಾಡಿಕೊಂಡಿದ್ದಾರೆ. ಈ ಸಂಖ್ಯೆ 10 ಲಕ್ಷ ದಾಟಿದ ಬಳಿಕ ಈ ಆ್ಯಪ್ ಕಾರ್ಯನಿರ್ವಹಿಸಲಿದೆ. ಇನ್ನು 30 ರೂ.ಗೆ ಹೊಸ ಸಿನಿಮಾ ನೋಡಬಹುದು. ಈ 30 ರೂ.ಗಳಲ್ಲಿ 15 ರೂಪಾಯಿ ಆಯಾ ಚಿತ್ರಗಳ ನಿರ್ಮಾಪಕರಿಗೆ ಸಲ್ಲುತ್ತದೆ. ಮಿಕ್ಕ 15 ರೂ. ಕ್ಯೂ ಸ್ಟಾರ್ ಕಂಪನಿಗೆ ಸಿಕ್ಕುತ್ತದೆ. ಇದರಿಂದ ಕನ್ನಡ ಸಿನಿಮಾ ನಿರ್ಮಾಪಕನಿಗೆ ಪ್ರದರ್ಶನ ಮಂದಿರಗಳಿಂದ ದುಡ್ಡು ಬರೆದೇ ಇದ್ದರೂ ಈ ಕ್ಯೂ ಸ್ಟಾರ್ ಆ್ಯಪ್​​ನಿಂದ ಬರುವುದು ಖಚಿತ.

ಮೇ.1 ರಿಂದ ಒಂದು ತಿಂಗಳಿಗೆ 120 ರೂಪಾಯಿ ಕೊಟ್ಟು ನಾಲ್ಕು ಕನ್ನಡ ಸಿನಿಮಾ ನೋಡಬಹುದು. ಕೇವಲ ಶುಕ್ರವಾರ, ಶನಿವಾರ ಹಾಗೂ ಭಾನುವಾರ ಮಾತ್ರ ಈ ಸಿನಿಮಾ ವೀಕ್ಷಣೆಗೆ ಅವಕಾಶ. ಸೋಮವಾರದಿಂದ ಗುರುವಾರ ತನಕ ಸಿನಿಮಾಗಳು ಲಭ್ಯ ಆಗೋದಿಲ್ಲ.

ತಮ್ಮ ಹೊಸ ಪ್ರಯತ್ನದ ಬಗ್ಗೆ ಮಾತನಾಡಿರುವ ಮುರಳಿ, 'ನಮ್ಮ ಕ್ಯೂ ಸ್ಟಾರ್ ಆ್ಯಪ್​​ನಲ್ಲಿ ದೊಡ್ಡ ನಟರುಗಳ ಸಿನಿಮಾಗಳು ಬೇಡ. ಈಗ ಚಲಾವಣೆಯಿರುವ ಡಿಜಿಟಲ್ ಮಾರುಕಟ್ಟೆ ವ್ಯವಸ್ಥೆಗೂ ನಮಗೂ ಸಂಬಂಧವಿಲ್ಲ. ಅಲ್ಲಿ ಏನಿದ್ದರೂ ದೊಡ್ಡ ಸಿನಿಮಾಗಳು ವ್ಯಾಪಾರ ಕುದುರಿಸುತ್ತದೆ. ನನ್ನ ಅಂದಾಜಿನ ಪ್ರಕಾರ ಸಣ್ಣ ಬಜೆಟ್​​ನ ಸಿನಿಮಾಗಳಿಗೆ ಕ್ಯೂಸ್ಟಾರ್​​​​ನಲ್ಲಿ ಹೆಚ್ಚು ಮಣೆ ಹಾಕಲಾಗುವುದು.

ಇನ್ನು 'ಕ್ಯೂ ಸ್ಟಾರ್' ಆ್ಯಪ್​​ನಲ್ಲಿ ಮುರಳಿ ಅವರು ಆಯಾ ಚಿತ್ರದ ಪುಕ್ಕಟ್ಟೆ ಪ್ರಚಾರ ಮಾಡುತ್ತಾರೆ. ಸಿನಿಮಾ ಆರಂಭದ ದಿವಸದಿಂದ ಬಿಡುಗಡೆ ತನಕ ಅದರ ಆಗುಹೋಗುಗಳನ್ನು ಬರವಣಿಗೆ ಹಾಗೂ ವಿಷುವಲ್ ಮುಖಾಂತರ ತುಂಬುತ್ತಾ ಹೋಗುತ್ತಾರೆ. ಇದರಿಂದ ಆಯಾ ಸಿನಿಮಾ ನೋಡುಗನಿಗೆ ಮಾಹಿತಿ ಲಭ್ಯ ಆದಂತೆ ಸಹ ಆಗುವುದು.

ಇಂದು ಥಿಯೇಟರ್​​​ಗೆ ಹೋಗಿ ಒಬ್ಬ ವ್ಯಕ್ತಿ ಒಂದು ಸಿನಿಮಾ ನೋಡಬೇಕು ಅಂದರೆ ಸಿಂಗಲ್ ಸ್ಕ್ರೀನ್ ಅಲ್ಲಿ 200 ರೂ, ಮಲ್ಟಿಪ್ಲೆಕ್ಸ್​ಗಳಲ್ಲಿ ಇದರ ಡಬಲ್ ಖರ್ಚು ಆಗುತ್ತದೆ. ಅಂತಹುದರಲ್ಲಿ ಕನ್ನಡ ಪ್ರೇಕ್ಷಕ 30 ರೂಪಾಯಿ ಕೊಟ್ಟರೆ ಅವನಿಗೆ ಬೇಕಾದ ಸ್ಥಳದಲ್ಲಿ ವಾರದ ಮೂರು ದಿವಸಗಳಲ್ಲಿ ಸಿನಿಮಾ ನೋಡಬಹುದು ಎನ್ನುತ್ತಾರೆ ಮುರಳಿ.

ಮೊದಲ ವಾರ ಸಿನಿಮಾ ಚಿತ್ರಮಂದಿರಗಳಿಂದ ಎತ್ತಂಗಡಿಯಾದ ಮೇಲೆ ಕ್ಯೂ ಸ್ಟಾರ್ ಅಲ್ಲಿ ಬಾರ್ ಕೋಡ್ ಹಾಕಿ 30 ರೂಪಾಯಿಗೆ ಸಿನಿಮಾ ನೋಡಬಹುದು.

10 ಲಕ್ಷ ಸದಸ್ಯತ್ವ ಹೊಂದಿದ ಮೇಲೆ ಒಬ್ಬ ವ್ಯಕ್ತಿಯಿಂದ 15 ರೂಪಾಯಿ ಅಂದರೆ ಕನ್ನಡ ಸಿನಿಮಾ ನಿರ್ಮಾಪಕನ ಜೇಬಿಗೆ 1.5 ಕೋಟಿ ರೂಪಾಯಿ ಸಂದಾಯ ಆಗುತ್ತದೆ. ಎಲ್ಲವೂ ಸರಿಯಾಗಿ ಕಾರ್ಯಗತ ಆದರೆ ಮಾತ್ರ ವರ್ಕೌಟ್​ ಆಗುತ್ತೆ.

ಇನ್ನು 'ಪಯಣಿಗರು' ಕನ್ನಡ ಸಿನಿಮಾ ಈ ಕ್ಯೂ ಸ್ಟಾರ್ ಆ್ಯಪ್​ನಲ್ಲಿ ಪ್ರದರ್ಶನ ಕಾಣುವ ಮೊದಲ ಕನ್ನಡ ಸಿನಿಮಾ.

ABOUT THE AUTHOR

...view details