ಕನ್ನಡ ಸಿನಿಮಾರಂಗದಲ್ಲಿ ತನ್ನದೇ ವಿಭಿನ್ನ ಕ್ಯಾರೆಕ್ಟರ್ ಹಾಗೂ ಮ್ಯಾನರಿಸಂನಿಂದಲೇ ಸಂಚಲನ ಸೃಷ್ಟಿಸಿದ 'ಟಗರು' ಸಿನಿಮಾದ ಡಾಲಿ ಖ್ಯಾತಿಯ ಧನಂಜಯ್ ದುಬೈನ ದೋಹದಲ್ಲಿ ನಡೆದ 2019ನೇ ಸಾಲಿನ ಸೈಮಾ ಅವಾರ್ಡ್ನಲ್ಲಿ ಉತ್ತಮ ಖಳನಾಯಕ ಅವಾರ್ಡ್ ಸ್ವೀಕರಿಸಿದ್ದು, ವಿಶ್ ಮಾಡಿದ ಎಲ್ಲಾ ಅಭಿಮಾನಿಗಳಿಗೂ ವಿಡಿಯೋ ಮೂಲಕ ಧನ್ಯವಾದ ತಿಳಿಸಿದ್ದಾರೆ.
ಆಗಸ್ಟ್ 22 ರಂದು ಧನಂಜಯ್ ಹುಟ್ಟುಹಬ್ಬವಿದ್ದು, ಈ ಬಾರಿಯೂ ಕಳೆದ ವರ್ಷದಂತೆ ಆಡಂಬರವಿಲ್ಲದೇ ಹುಟ್ಟುಹಬ್ಬ ಆಚರಿಸಲು ಡಾಲಿ ಮನವಿ ಮಾಡಿದ್ದಾರೆ. ನನ್ನ ಹುಟ್ಟುಹಬ್ಬವನ್ನು ಆಡಂಬರದಿಂದ ಆಚರಿಸುವುದು ಬೇಡ. ಹೂ ,ಪಟಾಕಿ ,ಕೇಕ್ ಶಾಲು ಪೇಟ ಇದ್ಯಾವುದೂ ಬೇಡ. ಅದಕ್ಕೆ ಕೊಡುವ ದುಡ್ಡನ್ನು ಉತ್ತರ ಕರ್ನಾಟಕ ಪ್ರವಾಹ ನಿರಾಶ್ರಿತರಿಗೆ ನಿಡೋಣ ಎಂದು ಡಾಲಿ ವಿಡಿಯೋ ಮೂಲಕ ಮನವಿ ಮಾಡಿದ್ದಾರೆ.
ಈ ಬಾರಿ ನೆರೆ ಸಂತ್ರಸ್ತರಿಗೆ ಸಹಾಯ ಮಾಡೋಣ ಎಂದು ಅಭಿಮಾನಿಗಳಿಗೆ ಕರೆ ನೀಡಿದ ಡಾಲಿ ಉತ್ತರ ಕರ್ನಾಟಕದಲ್ಲಿ ಪ್ರವಾಹಕ್ಕೆ ಸಿಲುಕಿ ಅಲ್ಲಿನ ಜನರು ತುಂಬಾ ಕಷ್ಟಅನುಭವಿಸುತ್ತಿದ್ದಾರೆ. ನೆರೆ ಸಂತ್ರಸ್ತರಿಗೆ ಜನರಿಂದ ಉತ್ತಮ ರೀತಿಯಲ್ಲಿ ಸ್ಪಂದನೆ ದೊರೆಯುತ್ತಿದೆ. ಅವರಿಗೆ ಬೇಕಾದಂತಹ ವಸ್ತುಗಳನ್ನು ತಲುಪಿಸುವ ಕೆಲಸ ಮಾಡಿದ್ದೀರಿ, ಅಭಿಮಾನಿಗಳು ಹಾಗೂ ಸಲಗ ಟೀಂ ಸಹ ನೆರೆ ಸಂತ್ರಸ್ತರಿಗೆ ನೆರವಾಗಿದ್ದಾರೆ.
ಪ್ರವಾಹದಿಂದ ಉತ್ತರ ಕರ್ನಾಟಕ ಮಂದಿ ಮನೆ ಕಳೆದುಕೊಂಡಿದ್ದಾರೆ. ಅವರಿಗೆ ನಾವು ಬದುಕು ಕಟ್ಟಿ ಕೊಡುವ ಕೆಲಸ ಮಾಡಬೇಕಿದೆ. ಅದಕ್ಕಾಗಿ ಈ ವರ್ಷವೂ ಸಹ ನನ್ನ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸೋಣ. ಅಲ್ಲದೆ ಹೂ, ಕೇಕ್, ಪಟಾಕಿಗಳಿಗೆ ಕೊಡುವ ಹಣವನ್ನು ಸಂತ್ರಸ್ತರಿಗೆ ಕೊಡಿ. ನಿಮ್ಮ ಜೊತೆ ನಮ್ಮ ಟೀಂ ಸಹ ಸಹಾಯಕ್ಕೆ ನಿಲ್ಲುತ್ತೇವೆ ಎಂದು ಡಾಲಿ ಧನಂಜಯ್ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.