ನಟಿ ಹರ್ಷಿಕಾ ಪೂಣಚ್ಚ ಇದುವರೆಗೂ ಲವ್ ಸ್ಟೋರಿಗಳಲ್ಲಿ ನಟಿಸಿದ್ದೇ ಹೆಚ್ಚು. ಅವರಿಗೆ ಒಂದು ಕಾಲ್ಪನಿಕ ಕಥೆ ಇರುವ ಕಾಸ್ಟ್ಯೂಮ್ ಡ್ರಾಮಾದಲ್ಲಿ ನಟಿಸಬೇಕು ಎಂಬ ಆಸೆ ಇತ್ತಂತೆ. ಅದೀಗ 'ಕಾಲನಾಗಿಣಿ' ಎಂಬ ಚಿತ್ರದಲ್ಲಿ ನನಸಾಗುತ್ತಿದೆ.
'ಕಾಲನಾಗಿಣಿ' ಎಂಬ ಹೆಸರೇ ಹೇಳುವಂತೆ ಇದೊಂದು ನಾಗಿಣಿಯ ಕುರಿತಾದ ಚಿತ್ರ. ಕನ್ನಡ ಚಿತ್ರರಂಗದಲ್ಲಿ ಇಂಥದ್ದೊಂದು ಚಿತ್ರ ಬರದೇ ಬಹಳ ವರ್ಷಗಳೇ ಆಗಿವೆ. ಈಗ ಅಂಥದ್ದೊಂದು ಪ್ರಯತ್ನವಾಗುತ್ತಿದೆ. ಈ ಹಿಂದೆ 'ರಿಂಗ್ ಮಾಸ್ಟರ್' ಮತ್ತು 'ಕಾಡಾ' ಎಂಬ ಚಿತ್ರಗಳನ್ನು ನಿರ್ದೇಶಿಸಿದ್ದ ವಿಶ್ರುತ್ ನಾಯಕ್ ಈ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ.
ಹರ್ಷಿಕಾ ಶಾಲೆಯಲ್ಲಿ ಓದುವಾಗ ನಾಗಿಣಿ ಹಾಡುಗಳಿಗೆ ನೃತ್ಯ ಮಾಡುತ್ತಿದ್ದರಂತೆ. ಚಿತ್ರರಂಗಕ್ಕೆ ಬಂದ ನಂತರ ಇಂಥದ್ದೊಂದು ಪಾತ್ರಕ್ಕೆ ಕಾಯುತ್ತಿದ್ದರಂತೆ. ಇದೀಗ ಅದು ನನಸಾಗಿದೆ. ಅಂದಹಾಗೆ, ಈ ಚಿತ್ರದಲ್ಲಿ ಅವರದ್ದು ಕೇವಲ ಒಂದು ಪಾತ್ರವಲ್ಲ, ಎರಡು ಪಾತ್ರಗಳಿವೆ. ನಾಗಿಣಿ ಜೊತೆಗೆ ರಾಣಿಯಾಗಿಯೂ ಅವರು ನಟಿಸುತ್ತಿದ್ದಾರೆ. ಹರ್ಷಿಕಾ ನಾಗಿಣಿಯಾಗಿ ನಟಿಸುತ್ತಿರುವುದು ಒಂದು ವಿಶೇಷವಾದರೆ, ಇದೇ ಮೊದಲ ಬಾರಿಗೆ ಅವರು ದ್ವಿಪಾತ್ರಗಳಲ್ಲಿ ಅಭಿನಯಿಸುತ್ತಿರುವುದು ಇನ್ನೊಂದು ವಿಶೇಷ.
ಈ ಚಿತ್ರಕ್ಕಾಗಿ ಬೆಂಗಳೂರಿನಲ್ಲಿ ಸೆಟ್ ಹಾಕಲಾಗುತ್ತಿದ್ದು, ನಾಳೆ ಗುರುವಾರ (ಅ.21) ಚಿತ್ರೀಕರಣ ಅಧಿಕೃತವಾಗಿ ಆರಂಭವಾಗಲಿದೆ. ಹರ್ಷಿಕಾ ಜೊತೆಗೆ ಮನೋಜ್ ಪುತ್ತೂರು, ಅವಿನಾಶ್, ಶರತ್ ಲೋಹಿತಾಶ್ವ ಮುಂತಾದ ಪ್ರತಿಭಾವಂತ ಕಲಾವಿದರ ದಂಡೇ ಇದೆ. ಮಧುರ ಮೂವೀಸ್ ಮೂಲಕ ಚಿತ್ರ ನಿರ್ಮಾಣವಾಗುತ್ತಿದೆ.
ಇದನ್ನೂ ಓದಿ:'ನಾರಪ್ಪ' ನಂತ್ರ ಟಾಲಿವುಡ್ನಲ್ಲಿ ಫುಲ್ ಬ್ಯುಸಿಯಾದ ವಸಿಷ್ಠ ಸಿಂಹ