ನಟ, ನಿರ್ದೇಶಕ, ಬರಹಗಾರ ನವೀನ್ ಕೃಷ್ಣ ಸುಮ್ಮನೆ ಕೂರುವವರಲ್ಲ. ಸ್ವಲ್ಪ ಬಿಡುವು ದೊರೆತರೂ ಸಾಕು ಆ ಸಮಯದಲ್ಲಿ ಏನೆಲ್ಲಾ ಮಾಡಬಹುದು ಎಂದು ಯೋಚಿಸುತ್ತಾರೆ. ಲಾಕ್ಡೌನ್ ಸಮಯದಲ್ಲಿ ಕೂಡಾ ವಿವಿಧ ವಿಡಿಯೋಗಳನ್ನು ಮಾಡಿ ಯೂಟ್ಯೂಬ್ನಲ್ಲಿ ಅಪ್ಲೋಡ್ ಮಾಡುತ್ತಿದ್ದ ನವೀನ್ ಕೃಷ್ಣ ಅವರ ಅಕಪೆಲ್ಲ ಶೈಲಿಯ ಹಾಡಿಗೆ ಉತ್ತಮ ಪ್ರತಿಕ್ರಿಯೆ ದೊರೆತಿದೆ.
ಹಾಡಿನ ಜೊತೆ ಬಾಯಿಯಿಂದಲೇ ವಾದ್ಯಗಳ ಸದ್ದನ್ನು ನುಡಿಸುವುದೇ ಅಕಪೆಲ್ಲ ಶೈಲಿಯ ಹಾಡು. ಈಗ ಹಾಡಿಗೆ ಉತ್ತಮ ಪ್ರತಿಕ್ರಿಯೆ ದೊರೆತಿರುವುದು ಕಲೆಗೆ ಸಂದ ಗೌರವ ಎಂದು ನವೀನ್ ಕೃಷ್ಣ ಸಂತೋಷ ವ್ಯಕ್ತಪಡಿಸಿದ್ದಾರೆ. ಜಿಯೋ ಸಾವನ್, ಆ್ಯಪಲ್ ಮ್ಯೂಸಿಕ್, ಹಂಗಾಮ, ವಿಂಕ್ನಂತ ಪ್ರತಿಷ್ಠಿತ ಸಂಸ್ಥೆಗಳು ನವೀನ್ ಕೃಷ್ಣ ಹಾಡನ್ನು ಇಷ್ಟಪಟ್ಟು ತಮ್ಮ ಚಾನೆಲ್ಗಳಲ್ಲೂ ಹಂಚಿಕೊಂಡಿದ್ದಾರೆ ಎನ್ನಲಾಗಿದೆ. ಅಭಿಮಾನಿಗಳು ಕೂಡಾ ನವೀನ್ ಕೃಷ್ಣ ಅವರ ಈ ಪ್ರಯತ್ನವನ್ನು ಶ್ಲಾಘಿಸಿದ್ದಾರೆ.
ಸದ್ಯಕ್ಕೆ ನವೀನ್ ಕೃಷ್ಣ 'ಆ ಕರಾಳ ರಾತ್ರಿ' ತೆಲುಗು ರೀಮೇಕ್ ಶೂಟಿಂಗ್ನಲ್ಲಿ ಬ್ಯುಸಿ ಇದ್ದಾರೆ. ಚಿತ್ರೀಕರಣ ಹೈದರಾಬಾದ್ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ನಡೆಯುತ್ತಿದ್ದು ಚಿತ್ರವನ್ನು ದಯಾಳ್ ಪದ್ಮನಾಭನ್ ಅವರೇ ನಿರ್ದೇಶಿಸುತ್ತಿದ್ದಾರೆ. ನವೀನ್ ಕೃಷ್ಣ, ದಯಾಳ್ ಪದ್ಮನಾಭನ್ ಅವರ ತಂಡದ ಖಾಯಂ ಸದಸ್ಯ ಕೂಡಾ. ನವೀನ್ ಕೃಷ್ಣ ಅವರ 'ಯು ರೈಟ್ ಐ ಸಿಂಗ್' ಕಾನ್ಸೆಪ್ಟ್ ಅಡಿಯಲ್ಲಿ 100 ಕ್ಕೂ ಹೆಚ್ಚು ಹಾಡುಗಳು ಬಂದಿವೆ. ಅದರಲ್ಲಿ ಕೆಲವನ್ನು ಅವರು ಆಯ್ಕೆ ಮಾಡಿಕೊಂಡು ತಮ್ಮ ಯುಟ್ಯೂಬ್ ಚಾನೆಲ್ನಲ್ಲಿ ಅಪ್ಲೋಡ್ ಮಾಡಿದ್ದಾರೆ.
ದಯಾಳ್ ಪದ್ಮನಾಭನ್ ಅವರೇ ನಿರ್ದೇಶಿಸಿರುವ 'ತ್ರಯಂಬಕಮ್' ಚಿತ್ರದಲ್ಲಿ ಕೂಡಾ ಅಕಪೆಲ್ಲ ಶೈಲಿಯ ಹಾಡನ್ನು ಅಳವಡಿಸಿಕೊಳ್ಳುವ ಪ್ರಯತ್ನ ಮಾಡಲಾಗಿತ್ತು. ಇದಕ್ಕೂ ಮುನ್ನ ಡಾ. ರಾಜ್ಕುಮಾರ್, ಶಂಕರ್ ನಾಗ್ ಅಭಿನಯದ ಕೆಲವೊಂದು ಸಿನಿಮಾಗಳ ಹಾಡಿಗೆ ಹಾಗೂ ನಂತರ 2017 ರಲ್ಲಿ ಕೆಲವು ಮಹಿಳಾ ಗಾಯಕಿಯರು ಸೇರಿಕೊಂಡು ನಗುವ ನಯನ.... ಹಾಡಿಗೆ ಅಕಪೆಲ್ಲ ಶೈಲಿಯಲ್ಲಿ ಹಾಡಿದ್ದರು. ಈ ಹಾಡುಗಳಿಗೆ ಕೂಡಾ ಒಳ್ಳೆ ಪ್ರಯತ್ನ ವ್ಯಕ್ತವಾಗಿತ್ತು.