ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ರಾಬರ್ಟ್' ಸಿನಿಮಾ ಬಿಡುಗಡೆಗೆ ಇನ್ನೆರಡು ದಿನಗಳಷ್ಟೇ ಬಾಕಿ ಇದೆ. ಈಗಾಗಲೇ ಮುಂಗಡ ಟಿಕೆಟ್ ಬುಕ್ಕಿಂಗ್ ಆರಂಭವಾಗಿದ್ದು ಅನೇಕ ಜನರು ಟಿಕೆಟ್ ಬುಕ್ ಮಾಡಿದ್ದಾರೆ. ಆದರೆ ಸಿನಿಮಾ ನೋಡಬೇಕೆಂದುಕೊಂಡಿದ್ದ ಕೆಲವರಿಗೆ ಶಾಕ್ ಆಗಿದೆ. ಇದಕ್ಕೆ ಕಾರಣ ಟಿಕೆಟ್ ದರ.
'ರಾಬರ್ಟ್' ಬಹುನಿರೀಕ್ಷಿತ ಸಿನಿಮಾ ಆಗಿದ್ದು ಸುಮಾರು 1400 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ. ಸಿನಿಮಾ ಮೇಲೆ ಸಾಕಷ್ಟು ನಿರೀಕ್ಷೆ ಇದ್ದು ಹೌಸ್ಫುಲ್ ಆಗೋದು ಪಕ್ಕಾ ಎನ್ನಲಾಗುತ್ತಿದೆ. ಆದರೆ ಮಲ್ಟಿಪ್ಲೆಕ್ಸ್ನಲ್ಲಿ 'ರಾಬರ್ಟ್' ಸಿನಿಮಾ ನೋಡಬೇಕು ಅಂದುಕೊಂಡಿರುವ ಅಭಿಮಾನಿಗಳ ಜೇಬಿಗೆ ಕತ್ತರಿ ಬಿಳೋದು ಗ್ಯಾರಂಟಿ. ಮಲ್ಟಿಪ್ಲೆಕ್ಸ್ಗಳಲ್ಲಿ ಚಿತ್ರದ ಟಿಕೆಟ್ ಬೆಲೆ ಬರೋಬ್ಬರಿ 300-500 ರೂಪಾಯಿ ಏರಿಕೆ ಆಗಿದೆ. ಸಾಮಾನ್ಯವಾಗಿ ಮಲ್ಟಿಪ್ಲೆಕ್ಸ್ ನಲ್ಲಿ ಕನ್ನಡ ಸಿನಿಮಾಗೆ ಟಿಕೆಟ್ ಬೆಲೆ ಹೆಚ್ಚಿಸಬಾರದು ಎಂಬುದು ಕಾನೂನು ಇದೆ. ಆದರೆ 200 ರೂಪಾಯಿ ಇದ್ದ ಟಿಕೆಟ್ ಬೆಲೆಯನ್ನು 500 ಹಾಗೂ 150 ರೂ ಇದ್ದ ಟಿಕೆಟ್ ಬೆಲೆಯನ್ನು 300 ರೂಪಾಯಿಗಳಿಗೆ ಏರಿಸಲಾಗಿದೆ.ಅಂದರೆ ಈ ಹಿಂದೆ ಇದ್ದ ಟಿಕೆಟ್ ಬೆಲೆಗಿಂತ ಎರಡರಷ್ಟು ಟಿಕೆಟ್ ಬೆಲೆಯನ್ನು 'ರಾಬರ್ಟ್' ಚಿತ್ರತಂಡ ಹೆಚ್ಚಿಸಿದೆ.