ನವದೆಹಲಿ:ಪ್ರಧಾನಿ ಮೋದಿ ಜೀವನಾಧಾರಿತ ಸಿನಿಮಾವನ್ನು ಭಾರತೀಯ ಚುನಾವಣಾ ಆಯೋಗ ಬ್ಯಾನ್ ಮಾಡುವುದಿಲ್ಲ ಎಂದು ಆಯೋಗದ ಮೂಲಗಳು ಹೇಳಿವೆ.
ಸೆನ್ಸಾರ್ ಮಂಡಳಿ ಈ ವಿಚಾರವನ್ನು ನಿರ್ಧರಿಸಲಿದೆ. ಮಂಡಳಿ ಸಿನಿಮಾದ ಎಲ್ಲ ವಿಚಾರವನ್ನು ನಿರ್ಣಯ ಮಾಡುವುದರಿಂದ ಮೋದಿ ಬಯೋಪಿಕ್ ಚುನಾವಣೆಯ ವೇಳೆ ರಿಲೀಸ್ ಆಗಬೇಕೋ ಬೇಡವೋ ಎನ್ನುವುದು ಸೆನ್ಸಾರ್ ಮಂಡಳಿಗೆ ಬಿಟ್ಟ ವಿಚಾರ ಎಂದು ಚುನಾವಣಾ ಆಯೋಗದ ಮೂಲಗಳು ತಿಳಿಸಿವೆ.
ಚಿತ್ರ ಬಿಡುಗಡೆಯ ದಿನಾಂಕ ಘೋಷಣೆಯಾದ ಬೆನ್ನಲ್ಲೇ ಪ್ರತಿಪಕ್ಷ ಕಾಂಗ್ರೆಸ್ ಚುನಾವಣೆಯ ವೇಳೆ ಸಿನಿಮಾ ರಿಲೀಸ್ ಆದಲ್ಲಿ ಅದು ಮತದಾರರ ಮೇಲೆ ಪರಿಣಾಮ ಬೀರುತ್ತದೆ ಮತ್ತು ನೀತಿ ಸಂಹಿತೆಯ ಉಲ್ಲಂಘನೆ ಎಂದು ಆರೋಪಿಸಿ ಆಯೋಗದ ಮೊರೆ ಹೋಗಿತ್ತು.
ಚಿತ್ರವನ್ನು ಬ್ಯಾನ್ ಮಾಡಬೇಕು ಎನ್ನುವ ಅರ್ಜಿ ಬಾಂಬೆ ಹೈಕೋರ್ಟ್ನಲ್ಲಿ ಸಲ್ಲಿಕೆಯಾಗಿತ್ತು. ಇದನ್ನು ವಿಚಾರಣೆ ನಡೆಸಿ ಅರ್ಜಿಯನ್ನು ಕೋರ್ಟ್ ತಳ್ಳಿಹಾಕಿದೆ. ಚುನಾವಣಾ ಆಯೋಗವೇ ಚಿತ್ರದ ಬ್ಯಾನ್ ಕುರಿತಂತೆ ತೀರ್ಮಾನಿಸಲಿದೆ ಎಂದು ತನ್ನ ನಿಲುವು ತಿಳಿಸಿತ್ತು.
ಒಮಂಗ್ ಕುಮಾರ್ ನಿರ್ದೇಶನದ ಮೋದಿ ಬಯೋಪಿಕ್ನಲ್ಲಿ ಮೋದಿ ಪಾತ್ರದಲ್ಲಿ ವಿವೇಕ್ ಒಬೇರಾಯ್ ಕಾಣಿಸಿಕೊಂಡಿದ್ದಾರೆ. ಈ ಚಿತ್ರ ಎಪ್ರಿಲ್ 5ರಂದು ಬಿಡುಗಡೆಯಾಗಲು ಸಿದ್ಧವಾಗಿದೆ.