ಸಾಹಸಸಿಂಹ ಡಾ. ವಿಷ್ಣುವರ್ಧನ್ ನಮ್ಮನ್ನು ಅಗಲಿ 11 ವರ್ಷಗಳು ಕಳೆದಿವೆ. ಜೊತೆಗೆ ಈ ಸೆಪ್ಟೆಂಬರ್ 18 ರಂದು ಅಭಿನಯ ಭಾರ್ಗವನ 70ನೇ ವರ್ಷದ ಹುಟ್ಟುಹಬ್ಬ. ವಿಷ್ಣು ಜನ್ಮದಿನವನ್ನು ಅಭಿಮಾನಿಗಳು ತಾವು ಇರುವಲ್ಲಿಯೇ ಅದ್ಧೂರಿಯಾಗಿ ಆಚರಿಸಲು ನಿರ್ಧರಿಸಿದ್ದಾರೆ.
ಮೈಸೂರು ಬಳಿಯ ಉದೂರಿನ ಹಾಲಾಳು ಗ್ರಾಮದಲ್ಲಿ ಸೆಪ್ಟೆಂಬರ್ 15 ರಂದು ವಿಷ್ಣು ಸ್ಮಾರಕಕ್ಕೆ ಭೂಮಿ ಪೂಜೆ ನೆರವೇರಲಿದೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಈ ಕಾರ್ಯಕ್ರಮಕ್ಕೆ ಆನ್ಲೈನ್ ಮೂಲಕ ಶುಭ ಹಾರೈಸಲಿದ್ದಾರೆ. ಭಾರತಿ ವಿಷ್ಣುವರ್ಧನ್, ಪುತ್ರಿ ಕೀರ್ತಿ, ಅಳಿಯ ಅನಿರುದ್ಧ್ ಜತ್ಕರ್ ಹಾಗೂ ಕುಟುಂಬದ ಇತರ ಸದಸ್ಯರು ಈ ಸಮಯದಲ್ಲಿ ಹಾಜರಿದ್ದು ಭೂಮಿ ಪೂಜೆ ನೆರವೇರಿಸಲಿದ್ದಾರೆ.
ಮತ್ತೊಂದೆಡೆ ಡಾ. ವಿಷ್ಣುವರ್ಧನ್ ಅವರ ಅಂತ್ಯಕ್ರಿಯೆ ನಡೆಸಲಾದ ಅಭಿಮಾನ್ ಸ್ಟುಡಿಯೋ 2 ಎಕರೆ ಜಾಗದಲ್ಲೇ ಡಾ. ವಿಷ್ಣುವರ್ಧನ್ ಸ್ಮಾರಕ ಆಗಬೇಕು ಎಂದು ಅಭಿಮಾನಿಗಳು ದುಂಬಾಲು ಬಿದ್ದಿದ್ದಾರೆ. ಆದರೆ ವಿಷ್ಣು ಅಗಲಿ 11 ವರ್ಷಗಳಾದರೂ ಈ ಬಗ್ಗೆ ಯಾವುದೇ ನಿರ್ಧಾರವಾಗಿಲ್ಲ. ಅಭಿಮಾನ್ ಸ್ಟುಡಿಯೋ ಬಳಿ ವಿಷ್ಣು ಅಭಿಮಾನಿಗಳು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ.