'ಅರುಂಧತಿ' ಚಿತ್ರದ ಮೂಲಕ ಸೋನು ಸೂದ್ ತಾನೊಬ್ಬ ಉತ್ತಮ ನಟ ಎಂಬುದನ್ನು ನಿರೂಪಿಸಿದ್ದರು. ಆದರೆ ಈ ಕೊರೊನಾ ಲಾಕ್ಡೌನ್ ಸಮಯದಲ್ಲಿ ಮನೆಗೆ ಹೋಗಲಾರದೆ ಪರದಾಡುತ್ತಿದ್ದ ವಲಸೆ ಕಾರ್ಮಿಕರನ್ನು ತಮ್ಮ ತಮ್ಮ ಊರುಗಳಿಗೆ ತಲುಪುವ ವ್ಯವಸ್ಥೆ ಮಾಡಿ ರೀಲ್ ಲೈಫ್ನಲ್ಲಷ್ಟೇ ಮಾತ್ರ ಅವರು ವಿಲನ್, ಆದರೆ ರಿಯಲ್ ಲೈಫ್ನಲ್ಲಿ ನಂಬರ್ ಒನ್ ಹೀರೋ ಎಂಬುದನ್ನು ಸಾಬೀತು ಮಾಡಿದ್ದರು.
ಸುಮಾರು 8 ಬಸ್ಗಳಲ್ಲಿ ವಲಸೆ ಕಾರ್ಮಿಕರನ್ನು ತಮ್ಮ ಊರುಗಳಿಗೆ ಸೇರಲು ಸಹಾಯ ಮಾಡಿದ್ದ ಸೋನು ಸೂದ್, ನಂತರ ಕೂಡಾ ಅನೇಕ ಬಡಬಗ್ಗರಿಗೆ ಸಹಾಯ ಮಾಡಿದರು. ವಿದ್ಯಾರ್ಥಿಗಳಿಗೆ, ರೈತರಿಗೆ, ರೋಗಿಗಳಿಗೆ ಸಹಾಯ ಹಸ್ತ ಚಾಚಿದ್ದರು. ಈ ಸಮಾಜಸೇವೆಯನ್ನು ಮುಂದುವರೆಸಲು ಸೋನು ಸೂದ್ ತಮ್ಮ ಪತ್ನಿ ಸೋನಾಲಿ ಅವರ ಹತ್ತು ಕೋಟಿ ರೂಪಾಯಿ ಆಸ್ತಿಯನ್ನು ಒತ್ತೆ ಇಟ್ಟಿದ್ದಾರೆ ಎನ್ನಲಾಗಿದೆ. ಮುಂಬೈನ ಜುಹು ಪ್ರಾಂತ್ಯಕ್ಕೆ ಸೇರಿದ 6 ಫ್ಲ್ಯಾಟ್ಗಳು ಹಾಗೂ 2 ಶಾಪಿಂಗ್ ಕಾಂಪ್ಲೆಕ್ಸ್ಗಳನ್ನು ಸೋನು ಸೂದ್ ಸೆಪ್ಟೆಂಬರ್ 15 ರಂದು ಒತ್ತೆ ಇಟ್ಟಿದ್ದು ನವೆಂಬರ್ 24 ರಂದು ಆಸ್ತಿಯನ್ನು ರಿಜಿಸ್ಟರ್ ಮಾಡಿಸಿದ್ದಾರೆ ಎಂದು ಸೋನು ಸೂದ್ ಆಪ್ತರು ತಿಳಿಸಿದ್ದಾರೆ. ಈ ಮೂಲಕ ಸೋನು ಸೂದ್ ಜನರ ಹೃದಯಕ್ಕೆ ಮತ್ತಷ್ಟು ಹತ್ತಿರವಾಗಿದ್ದಾರೆ. ಆದರೆ ಕೆಲವು ಅಭಿಮಾನಿಗಳು ಮಾತ್ರ ಬಡವರಿಗೆ ಸಹಾಯ ಮಾಡಲು ತಮ್ಮ ಆಸ್ತಿಯನ್ನು ಒತ್ತೆ ಇಡುವುದು ಸರಿಯಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.