ಸಂಗೀತ ಲೋಕದ ಗಾನ ಕೋಗಿಲೆ ಲತಾ ಮಂಗೇಶ್ಕರ್ ಸಾವಿನ ಬೆನ್ನಲ್ಲೇ ಬಾಲಿವುಡ್ ಪ್ರಖ್ಯಾತ ಸಂಗೀತ ನಿರ್ದೇಶಕ ಹಾಗೂ ಗಾಯಕ ಬಪ್ಪಿ ಲಹಿರಿ (69) ನಿನ್ನೆ ನಿಧನರಾಗಿದ್ದಾರೆ.
70 ಹಾಗೂ 80ರ ದಶಕದಲ್ಲಿ ಬಾಲಿವುಡ್ ಚಿತ್ರರಂಗದಲ್ಲಿ ಸಾಂಪ್ರದಾಯಿಕ ಹಾಡುಗಳನ್ನು ಹಾಡುವ ಮೂಲಕ ಇವರು ಹಿಂದಿ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದರು. ಬಿ ಟೌನ್ ಎವರ್ ಗ್ರೀನ್ ಹೀರೋ ಮಿಥುನ್ ಚಕ್ರವರ್ತಿ ಅಭಿನಯದ 'ಡಿಸ್ಕೋ ಡ್ಯಾನ್ಸರ್' ಸಿನಿಮಾದಲ್ಲಿ 'ಐ ಯಾಮ್ ಎ ಡಿಸ್ಕೋ ಡ್ಯಾನ್ಸರ್' ಎಂಬ ಹಾಡನ್ನು ಬಪ್ಪಿ ಹಾಡಿದ್ದರು. ಈ ಹಾಡು ಆ ಕಾಲದಲ್ಲಿ ಸೂಪರ್ ಹಿಟ್ ಆಗುವ ಮೂಲಕ ಬಪ್ಪಿ ಲಹಿರಿಗೆ ಡಿಸ್ಕೋ ಕಿಂಗ್ ಎಂದೇ ಹೆಸರು ತಂದುಕೊಟ್ಟಿತ್ತು.
ಹಿಂದಿ, ತೆಲುಗು ಸಿನಿಮಾಗಳಲ್ಲಿ ಸೂಪರ್ ಹಿಟ್ ಹಾಡುಗಳನ್ನು ಹಾಡಿದ್ದ ಬಪ್ಪಿ ಲಹಿರಿಯನ್ನು ಹಿರಿಯ ನಟ, ನಿರ್ದೇಶಕ ಹಾಗೂ ನಿರ್ಮಾಪಕ ಮತ್ತು ಕರ್ನಾಟಕದ ಕುಳ್ಳ ಎಂದೇ ಕರೆಯಿಸಿಕೊಂಡಿರುವ ದ್ವಾರಕೀಶ್, ಕನ್ನಡಕ್ಕೆ ಕರೆತಂದರು. ದ್ವಾರಕೀಶ್ ನಿರ್ಮಾಣ, ನಿರ್ದೇಶಿಸಿದ್ದ 'ಆಫ್ರಿಕಾದಲ್ಲಿ ಶೀಲಾ' ಚಿತ್ರಕ್ಕೆ ಬಪ್ಪಿ ಲಹರಿ ಸಂಗೀತ ನೀಡಿದ್ದರು.
1986ರಲ್ಲಿ ತೆರೆಕಂಡ ಆ ಸಿನಿಮಾದ ಮೂಲಕ ಮೊದಲ ಬಾರಿಗೆ ಅವರು ಕನ್ನಡಕ್ಕೆ ಎಂಟ್ರಿ ಕೊಟ್ಟಿದ್ದರು. ನಂತರ ವಿಷ್ಣುವರ್ಧನ್ ಅವರ 'ಕೃಷ್ಣ ನೀ ಬೇಗನೆ ಬಾರೋ', 'ಪೊಲೀಸ್ ಮತ್ತು ದಾದಾ' ಹಾಗು 'ಕರ್ಣ' ಸಿನಿಮಾದಲ್ಲಿ ಬಪ್ಪಿ ಲಹರಿ ಹಾಡಿದ್ದಾರೆ. ವಿಷ್ಣುವರ್ಧನ್ ಮತ್ತು ಸುಮಲತಾ ಅಂಬರೀಶ್ ಕಾಂಬಿನೇಷನ್ನ ಈ ಸಿನಿಮಾದಲ್ಲಿ ಆ ಕರ್ಣನಂತೆ, ಪ್ರೀತಿಯೇ ನನ್ನುಸಿರು ಹಾಡನ್ನ ಹಾಡಿದ್ದರು. ಎಂ.ರಂಗರಾವ್ ಸಂಗೀತ ಸಂಯೋಜನೆ ನೀಡಿದ್ದರು.
ವಿಷ್ಣುವರ್ಧನ್ ಬಳಿಕ ಅಂಬರೀಶ್ ನಟಿಸಿದ್ದ 'ಗುರು' ಸಿನಿಮಾಗೆ ಬಪ್ಪಿ ಲಹರಿ ಸಂಗೀತ ನೀಡಿದ್ದರು. ಈ ಸಿನಿಮಾ ಬಳಿಕ ಬಹಳ ವರ್ಷಗಳ ನಂತರ ಬಪ್ಪಿ ಲಹರಿ ಮತ್ತೆ ನೀನಾಸಂ ಸತೀಶ್ ಹೀರೋ ಆಗಿದ್ದ ಲವ್ ಇನ್ ಮಂಡ್ಯ ಚಿತ್ರಕ್ಕಾಗಿ ಕನ್ನಡಕ್ಕೆ ಬಂದರು. ಈ ಸಿನಿಮಾದಲ್ಲಿ ಕರೆಂಟ್ ಹೋದ ಟೈಮಲಿ ಎಂಬ ಹಾಡನ್ನು ಬಪ್ಪಿ ಲಹರಿ ಹಾಡಿದರು. ಈ ಹಾಡು ಕೂಡ ಹಿಟ್ ಆಗಿತ್ತು.
ತಮ್ಮ ವಿಶಿಷ್ಟವಾದ ಸಂಗೀತ ಶೈಲಿ ಹಾಗೂ ಹಾಡುಗಾರಿಕೆಯಿಂದ ಪ್ರಸಿದ್ಧಿ ಪಡೆದಿದ್ದ ಬಪ್ಪಿ ಲಹರಿ ಇನ್ನು ನೆನಪು ಮಾತ್ರ. ಈ ಕಲಾವಿದನ ನಿಧನಕ್ಕೆ ಇಡೀ ಸೌತ್ ಚಿತ್ರರಂಗದ ತಾರೆಯರು ಕಂಬನಿ ಮಿಡಿದಿದ್ದಾರೆ.