ತಾಯಿ ಸೆಂಟಿಮೆಂಟ್ ಹಾಡು ಅಂದರೆ ಮೊದಲು ನೆನಪಿಗೆ ಬರುವುದು ನಿರ್ದೇಶಕ ಜೋಗಿ ಪ್ರೇಮ್. ವಿಚಿತ್ರ ಟೈಟಲ್ ಹೊಂದಿರುವ 'ಕಂಡ್ಹಿಡಿ ನೋಡೋಣ' ಚಿತ್ರದ ಹಾಡೊಂದಕ್ಕೆ ಪ್ರೇಮ್ ದನಿ ನೀಡಿದ್ದಾರೆ. ಚಿತ್ರಕ್ಕಾಗಿ ಹಾಡು ಹಾಡಿರುವ ಪ್ರೇಮ್ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ.
'ಕಂಡ್ಹಿಡಿ ನೋಡೋಣ' ಚಿತ್ರಕ್ಕಾಗಿ ಹಾಡಿದ ಪ್ರೇಮ್... - Jogi prem
'ಕಂಡ್ಹಿಡಿ ನೋಡೋಣ' ಎಂಬ ವಿಚಿತ್ರ ಟೈಟಲ್ ಹೊಂದಿರುವ ಸಿನಿಮಾವೊಂದನ್ನು ನಾಗೇಂದ್ರ ಅರಸ್ ನಿರ್ದೇಶಿಸುತ್ತಿದ್ದು ಈ ಚಿತ್ರಕ್ಕಾಗಿ ಜೋಗಿ ಪ್ರೇಮ್ ಹಾಡೊಂದನ್ನು ಹಾಡಿದ್ದಾರೆ.
ಈ ಚಿತ್ರ ಸೆಟ್ಟೇರಿ ಬಹಳ ದಿನಗಳಾಗಿದ್ದು, ಶೇಕಡಾ 60 ರಷ್ಟು ಚಿತ್ರೀಕರಣ ಮುಗಿಸಿದೆ. 'ಕಂಡ್ಹಿಡಿ ನೋಡೋಣ' ಶೀರ್ಷಿಕೆಯೇ ಬಹಳ ಹಾಸ್ಯಮಯವಾಗಿದೆ ಚಿತ್ರವೂ ಕೂಡಾ ಶೀರ್ಷಿಕೆಯಂತೆ ಹಾಸ್ಯದ ಜೊತೆಗೆ ಒಂದಷ್ಟು ಆ್ಯಕ್ಷನ್, ಸಸ್ಪೆನ್ಸ್ ಹಾಗೂ ಥ್ರಿಲ್ಲರ್ ಆಗಿದೆಯಂತೆ. ನಾಗೇಂದ್ರ ಅರಸ್ ನಿರ್ದೇಶನದಲ್ಲಿ ಹಾಗೂ ದಿವ್ಯ ಚಂದ್ರರ್ ಮತ್ತು ಯೋಗೇಶ್ ಗೌಡ ನಿರ್ಮಾಣದಲ್ಲಿ ಚಿತ್ರ ಮೂಡಿಬರುತ್ತಿದೆ. ನಾಗೇಂದ್ರ ಅರಸ್ ಚಿತ್ರದ ನಿರ್ದೇಶನದ ಜೊತೆಗೆ ಸಂಕಲನದ ಜವಾಬ್ದಾರಿ ಹೊತ್ತಿದ್ದಾರೆ ಹಾಗೂ ಪಾತ್ರವೊಂದಕ್ಕೆ ಬಣ್ಣ ಹಚ್ಚಿದ್ದಾರೆ. ಇನ್ನು ಚಿತ್ರಕಥೆ ಜವಾಬ್ದಾರಿ ಹೊತ್ತಿರುವುದು ಮ್ಯಾನ್ಲಿಯೋ ಪ್ರೊಡಕ್ಷನ್ ಮಾಲೀಕ ಹಾಗೂ ನಾಯಕ ನಟ ಪ್ರಣವ್. ಪ್ರಣವ್ ಈಗಾಗಲೇ 'ಸೈಕೋ ಶಂಕರ' ಚಿತ್ರದ ಮೂಲಕ ನಾಯಕ ನಟನಾಗಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದು, ಈಗ ಈ ಚಿತ್ರದಲ್ಲೂ ಒಬ್ಬ ಮಧ್ಯಮ ಕುಟುಂಬದಲ್ಲಿ ಹುಟ್ಟಿ ಐಶಾರಾಮಿ ಕನಸು ಕಾಣುವ ಹುಡುಗನಾಗಿ ಅಭಿನಯಿಸಿದ್ದಾರೆ.
ಮಾಧ್ಯಮದಲ್ಲಿ ಸಿನಿಮಾ ರಿಪೋರ್ಟರ್ ಆಗಿದ್ದ ಆದರ್ಶ ಎಂಬುವವರು ಈ ಚಿತ್ರದಲ್ಲಿ ಎರಡನೇ ನಾಯಕನಾಗಿ ಅಭಿನಯಿಸಿದ್ದಾರೆ. ಜಯಸಿಂಹ ಮುಸುರಿ ಕೂಡಾ ಚಿತ್ರದಲ್ಲಿ ವಿಭಿನ್ನ ಪಾತ್ರ ಮಾಡಿದ್ದಾರಂತೆ. ಹಿರಿಯ ನಟಿ ಗಿರಿಜಾ ಲೋಕೇಶ್, ವಿಜಯ್ ಚಂಡೂರ್, ಅರುಣ್, ಪ್ರಿಯಾಂಕ ಮಲಾಲಿ, ಮಾಣಿಕ್ಯ ಹಾಗೂ ಶಿಲ್ಪ ಬರಿಕೆ ಮುಂತಾದವರು ಚಿತ್ರದ ತಾರಾಗಣದಲ್ಲಿ ಇದ್ದಾರೆ. ಇದೊಂದು ಸಸ್ಪೆನ್ಸ್ ಮತ್ತು ಹಾರರ್ ಚಿತ್ರವಾದರೂ ಚಿತ್ರದಲ್ಲಿ ತಾಯಿ ಸೆಂಟಿಮೆಂಟ್ ಜೊತೆಗೆ ಪ್ರೀತಿ, ಪ್ರೇಮ, ಪ್ರಣಯ, ಹಾಸ್ಯ ಮತ್ತು ಆ್ಯಕ್ಷನ್ ಹೀಗೆ ಸಂಪೂರ್ಣ ಮನರಂಜನೆ ಇದೆ ಎಂದು ಚಿತ್ರತಂಡ ಹೇಳಿದೆ.