ಕನ್ನಡ ಚಿತ್ರರಂಗದಲ್ಲಿ ಹರಿವು ಹಾಗೂ ನಾತಿಚರಾಮಿ ಚಿತ್ರಗಳಿಗೆ ರಾಷ್ಟ್ರ ಪ್ರಶಸ್ತಿ ಪಡೆದ ನಿರ್ದೇಶಕ ಮಂಸೋರೆ. ಕಳೆದ ವರ್ಷ ಆಕ್ಟ್ 1978 ಎಂಬ ಮತ್ತೊಂದು ವಿಭಿನ್ನ ಸಿನಿಮಾ ಮಾಡಿ, ಪ್ರೇಕ್ಷಕರ ಮನಸ್ಸು ಗೆಲ್ಲುವಲ್ಲಿ ಯಶ್ವಸಿಯಾದವರು. ಸದ್ಯ ಹೊಸ ಕಥೆಯ ಸಿನಿಮಾ ಮಾಡುವುದರಲ್ಲಿ ನಿರತರಾಗಿರೋ ನಿರ್ದೇಶಕ ಮಂಸೋರೆ, ಬೆಂಗಳೂರು ಸಂಚಾರಿ ಪೊಲೀಸರ ಹೊಸ ನಿಯಮದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಿನ್ನೆಯಷ್ಟೇ ವಾಹನ ಚಲಾಯಿಸುವ ವೇಳೆ, ಹೆಡ್‌ಫೋನ್ ಹಾಗೂ ಬ್ಲ್ಯೂಟೂತ್ ಬಳಕೆಯನ್ನ ನಿಷೇಧಿಸಲಾಗಿದೆ. ಈ ನಿಯಮ ಉಲ್ಲಂಘಿಸಿದವರಿಗೆ ಸಂಚಾರ ಪೊಲೀಸರು 1000 ರೂಪಾಯಿ ದಂಡ ಹಾಕಲಾಗುವುದು ಎಂದು ಟ್ರಾಫಿಕ್ ಪೊಲೀಸರು ಹೇಳಿದ್ದಾರೆ. ಈ ಬಗ್ಗೆ ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಮಂಸೋರೆ, ಟ್ರಾಫಿಕ್ ಪೊಲೀಸರಿಗೆ ಒಂದಿಷ್ಟು ಪ್ರಶ್ನೆಗಳನ್ನ, ಸೋಷಿಯಲ್ ಮೀಡಿಯಾದಲ್ಲಿ ಕೇಳುವ ಮೂಲಕ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಅಭಿನಂದನೆಗಳು ಟ್ರಾಫಿಕ್ ಪೊಲೀಸ್ ಇಲಾಖೆಗೆ, ಜನರಿಂದ ದಂಡದ ರೂಪದಲ್ಲಿ ಇನ್ನಷ್ಟು ರಕ್ತ ಹೀರಿ, ನಿಮ್ಮ ಸರ್ಕಾರದ ಧಣಿಗಳ ಹಾಗೂ ಖಜಾನೆ ತುಂಬಿಸಲು ಹೊಸ ಮಾರ್ಗವೊಂದನ್ನು ಕಂಡು ಹಿಡಿದುಕೊಂಡಿರುವುದಕ್ಕೆ. ಜನರ ಸುರಕ್ಷೆಯ ಬಗ್ಗೆ ನಿಮಗಿರುವ ಕಾಳಜಿಗೆ ಅನಂತಾನಂತ ಧನ್ಯವಾದಗಳು.
ಆದರೂ ಜನಸಾಮಾನ್ಯನಾಗಿ ನನ್ನ ಕೆಲ ಸಂದೇಹಗಳಿಗೆ ನೀವು ಉತ್ತರಿಸುವಿರಾ?
1. ಇಂದಿನ ದುರಿತಕಾಲದಲ್ಲಿ ಬದುಕು ಸವೆಸಲು ನಾನಾ ಉದ್ಯೋಗಗಳನ್ನು ಮಾಡಬೇಕಿರುವ ಅವಶ್ಯಕತೆಯಲ್ಲಿ ಬಹುತೇಕ ಮಂದಿ ಬದುಕುತ್ತಿದ್ದಾರೆ. ಅವರಿಗೆ ಇಂದಿನ ದಿನದಲ್ಲಿ ಮೊಬೈಲ್ ಅತ್ಯವಶ್ಯಕ ಹಾಗೂ ಅನಿವಾರ್ಯ ಸಾಧನ. ಅವರಿಗೆ ಬರುವ ಪ್ರತಿ ಕರೆಯೂ ಮುಖ್ಯವಾಗಿರುತ್ತದೆ. ಈಗ ವಾಹನ ಚಲಾಯಿಸುತ್ತಿರುವಾಗ ಕರೆ ಬಂದಾಗ ಏನು ಮಾಡಬೇಕು? ಗಾಡಿ ಬದಿಗೆ ನಿಲ್ಲಿಸಿ ಮಾತನಾಡಿ ಎಂಬ ಪುಕ್ಕಟೆ ಸಲಹೆ ಕೊಡಬೇಡಿ. ಇರುವ ರಸ್ತೆಗಳಲ್ಲಿ ಓಡಾಡಲಿಕ್ಕೆ ಗಾಡಿಗಳಿಗೇ ಜಾಗವಿಲ್ಲ. ಇನ್ನು, ಗಾಡಿ ಎಲ್ಲಿ ನಿಲ್ಲಿಸಿ ಮಾತನಾಡಬೇಕು? ಅದಕ್ಕಾಗಿ ಪ್ರತ್ಯೇಕ ಪಥ ನಿರ್ಮಾಣ ಮಾಡಿದ್ದೀರಾ?
2. ನನ್ನಂತಹ ಜನಸಾಮಾನ್ಯ ಇಂದಿನ ಕಾಲದ ವೇಗಕ್ಕೆ ಹೊಂದಿಕೊಂಡು ಬದುಕಬೇಕು ಅಂದರೆ ದ್ವಿಚಕ್ರ ಅನಿವಾರ್ಯ. ಇಲ್ಲವೆಂದರೆ ನಮ್ಮ ಎಲ್ಲಾ ಕೆಲಸಗಳಿಗೂ ಸಮಯ ಹೊಂದಿಸಿಕೊಳ್ಳುವುದು ಕಷ್ಟ. ಆಟೋ ಕ್ಯಾಬ್‌ಗಳಲ್ಲೇ ಓಡಾಡುವಷ್ಟು ಶ್ರೀಮಂತರು ನಾವಲ್ಲ. ಏನೋ ಇರೋ ಗಾಡಿಗಳಲ್ಲಿ ಓಡಾಡುತ್ತಾ ಜೀವನ ನಿರ್ವಹಣೆ ಮಾಡೋಣ ಎಂದರೆ ಹೀಗೆ ದಿನಕ್ಕೊಂದು ನಿಯಮದ ಹೆಸರಲ್ಲಿ ನಮ್ಮ ರಕ್ತ ಹೀರುತ್ತಿದ್ದರೆ ನಾವು ಎಲ್ಲಿ ಹೋಗಬೇಕು ನೀವೇ ಹೇಳಿ?
3. ಬೆಂಗಳೂರಿನ ಬಹುತೇಕ ರಸ್ತೆಗಳು ಹಾಳಾಗಿವೆ. ಸರಿಯಾದ ರಸ್ತೆ ನಾಗರಿಕರ ಮೂಲಭೂತ ಹಕ್ಕು. ಅದನ್ನು ಒದಗಿಸಲು ವಿಫಲವಾಗಿರುವ ನಿಮ್ಮ ಧಣಿಗಳ ಸರ್ಕಾರ ಹಾಗೂ ನಿಮಗೆ ದಂಡ ವಸೂಲಿ ಮಾಡುವ ನೈತಿಕ ಹಕ್ಕಿದೆಯೇ?
4. ನಿಮ್ಮ ಧಣಿಗಳಿಗೆ ಹಾಗೂ ನಿಮಗೆ ನಮ್ಮ ಹಣದಲ್ಲಿ ನಾವು ಚಾಲಕರನ್ನು ಒದಗಿಸಿದ್ದೇವೆ. ಹಾಗಾಗಿ, ಇಂತಹ 'ಸುರಕ್ಷತೆಯ' ನೆಪದಲ್ಲಿ ರಕ್ತ ಹೀರುವ ದಂಡದ ಕಾನೂನನ್ನು ನಮ್ಮ ಮೇಲೆ ಹೇರುತ್ತಿದ್ದೀರಾ, ಈಗ ನಮ್ಮ ದ್ವಿಚಕ್ರ ವಾಹನಗಳನ್ನು ಚಲಾಯಿಸಲು ಚಾಲಕರನ್ನು ನೀವಾಗಲಿ ನಿಮ್ಮ ಧಣಿಗಳ ಸರ್ಕಾರವಾಗಲಿ ನಮಗೆ ಒದಗಿಸುತ್ತದೆಯೇ? ಅಥವಾ ಚಾಲಕರನ್ನು ನೇಮಿಸಿಕೊಂಡರೆ ಅವರ ಖರ್ಚು ವೆಚ್ಚ ಹಾಗೂ ವೇತನವನ್ನು ನಿಮ್ಮ ಧಣಿಗಳ ಸರ್ಕಾರ ನೀಡುತ್ತದೆಯೇ ದಯವಿಟ್ಟು ಸ್ಪಷ್ಟನೆ ನೀಡಿ.
5. ಇದು ನನ್ನ ವೈಯಕ್ತಿಕ ಸಮಸ್ಯೆ, ನಾನು ಈವರೆಗೂ ವಾಹನ ಚಲಾಯಿಸುವಾಗ ಬ್ಲ್ಯೂಟೂತ್ ಬಳಸುತ್ತಾ ಬಂದಿದ್ದೇನೆ, ಅದಕ್ಕೆ ಮುಖ್ಯ ಕಾರಣ ಕರೆ ಬಂದಾಗ ಸ್ವೀಕರಿಸಲು ಅಲ್ಲ, ಟ್ರಾಫಿಕ್‌ನಲ್ಲಿ ಉಳಿದ ಸವಾರರು ಉಂಟು ಮಾಡುವ ಅನಾವಶ್ಯಕ ಶಬ್ದ ಮಾಲಿನ್ಯದಿಂದ ನನಗಾಗುವ ಮಾನಸಿಕ ಒತ್ತಡ ಹಾಗೂ ಉದ್ವೇಗದಿಂದ ಪಾರಾಗಿ, ಮನಸ್ಸನ್ನು ಸ್ಥಿತಪ್ರಜ್ಞೆಯಲ್ಲಿ ಇರಿಸಿಕೊಳ್ಳಲು ಹಾಡು, ಸಂಗೀತ ಕೇಳುತ್ತೇನೆ.
ಬೆಂಗಳೂರಿನಲ್ಲಿ ವಾಹನ ಚಲಾಯಿಸಲು ಆರಂಭಿಸಿ ಹದಿಮೂರು ವರ್ಷಗಳ ಅನುಭವದಲ್ಲಿ ಒಂದೇ ಒಂದು ಅಪಘಾತ ಮಾಡಿಲ್ಲ. ನಾನು ವಾಹನ ಚಲಾಯಿಸುವಾಗ ಇತರರು ಮಾಡುವ ಕಿರಿಕಿರಿಯಿಂದ ನನ್ನನ್ನು ಪಾರು ಮಾಡಿರುವುದೇ ಸಂಗೀತ, ಹಾಡುಗಳು. ಇಂದಿನಿಂದ ಅದಕ್ಕೆ ನೀವು ಕತ್ತರಿ ಹಾಕುತ್ತಿರುವುದರಿಂದ ಇನ್ನು ಮುಂದಿನ ದಿನಗಳಲ್ಲಿ ರಸ್ತೆಯಲ್ಲಿ ಆಗುವ ಮಾನಸಿಕ ಒತ್ತಡ ಹಾಗೂ ಉದ್ವೇಗಕ್ಕೆ ನೀವು ಸೂಚಿಸುವ ಪರಿಹಾರ ಏನು?
6. ಕೊನೆಯದಾಗಿ ನನ್ನಂತವರಿಗೆ ಕಿರಿಕಿರಿ ಮಾಡಿ ಉದ್ವೇಗ ಹೆಚ್ಚುವಂತೆ ಮಾಡುವ ಕರ್ಕಶ ಹಾರ್ನ್ಗಳ ನಿರ್ಬಂಧಕ್ಕೆ ಏನು ಮಾರ್ಗ ಹುಡುಕಿಕೊಂಡಿರುವಿರಿ? ಇನ್ನೂ ಒಂದಷ್ಟು ಪ್ರಶ್ನೆಗಳಿವೆ ಸದ್ಯಕ್ಕೆ ಇಷ್ಟು ಸಾಕು ಎಂದು ಬರೆದುಕೊಂಡಿದ್ದಾರೆ.