ಕಳೆದ ಭಾನುವಾರ ಹೃದಯಾಘಾತದಿಂದ ಚಿರಂಜೀವಿ ಸರ್ಜಾ ನಿಧನರಾಗಿದ್ದು ಅವರ ಅಗಲಿಕೆ ಕೇವಲ ಚಿತ್ರರಂಗಕ್ಕೆ ಮಾತ್ರವಲ್ಲದೇ ಇಡೀ ಕನ್ನಡದ ಜನತೆಗೆ ಶಾಕ್ ನೀಡಿದೆ. ಚಿರಂಜೀವಿ ಅವರು ನಮ್ಮಿಂದ ದೂರವಾಗಿ ಐದು ದಿನಗಳಾಗುತ್ತಾ ಬಂದರೂ, ಅವರಿಲ್ಲ ಎಂಬ ಸುದ್ದಿ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.
ಚಿರಂಜೀವಿ ಅವರು ಇಲ್ಲ ಎಂಬ ಬೇಸರದ ನಡುವೆ ಅವರ ಅಭಿನಯದ ಚಿತ್ರವೊಂದು ಈ ವಾರಾಂತ್ಯ ಕಿರುತೆರೆಯಲ್ಲಿ ಪ್ರಸಾರವಾಗಲಿದೆ. ಚಿರಂಜೀವಿ ಸರ್ಜಾ ಅಭಿನಯದ, ಕೆ.ಎಂ ಚೈತನ್ಯ ನಿರ್ದೇಶನದ ಆದ್ಯಾ ಸಿನಿಮಾ ಇದೇ ಶನಿವಾರ ಸಂಜೆ 6 ಗಂಟೆಗೆ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗಲಿದೆ.
ಇದೇ ವರ್ಷ ಫೆಬ್ರವರಿ 21 ರಂದು ಆದ್ಯಾ ಸಿನಿಮಾ ಬಿಡುಗಡೆಯಾಗಿದ್ದು, ಚಿರಂಜೀವಿ ಸರ್ಜಾ ಜೊತೆಗೆ ಸಂಗೀತ ಭಟ್, ಶೃತಿ ಹರಿಹರನ್ ಮತ್ತು ರವಿಶಂಕರ್ ಗೌಡ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಅಂದ ಹಾಗೇ 2016 ರಲ್ಲಿ ತೆಲುಗು ಭಾಷೆಯಲ್ಲಿ ಬಿಡುಗಡೆಯಾಗಿರುವ ಕ್ಷಣಂ ಸಿನಿಮಾದ ರಿಮೇಕ್ ಇದಾಗಿದ್ದು, ಇಲ್ಲಿಗೆ ಬೇಕಾಗಿರುವ ಹಾಗೇ ಕತೆಯನ್ನು ಬದಲಾಯಿಸಲಾಗಿದೆ.