ಅಭಿನಯ ಚಕ್ರವರ್ತಿ, ಅಭಿಮಾನಿಗಳ ಪ್ರೀತಿಯ ಕಿಚ್ಚ ಸುದೀಪ್ ನಿನ್ನೆಯಷ್ಟೇ 47 ನೇ ವಸಂತಕ್ಕೆ ಕಾಲಿರಿಸಿದ್ದಾರೆ. ಸುದೀಪ್ ಅಭಿಮಾನಿಗಳೊಂದಿಗೆ ಹುಟ್ಟುಹಬ್ಬ ಆಚರಿಸಿಕೊಳ್ಳದಿದ್ದರೂ ಅಭಿಮಾನಿಗಳು ಮಾತ್ರ ರಾಜ್ಯಾದ್ಯಂತ ಕಿಚ್ಚನ ಹೆಸರಿನಲ್ಲಿ ಪೂಜೆ, ಸಮಾಜ ಸೇವೆ ಮಾಡುವ ಮೂಲಕ ಮೆಚ್ಚಿನ ನಟನ ಹುಟ್ಟುಹಬ್ಬ ಆಚರಿಸಿದ್ದಾರೆ.
ವೃದ್ಧಾಶ್ರಮಕ್ಕೆ ಭೂಮಿಪೂಜೆ ನೆರವೇರಿಸಿದ ಪ್ರಿಯಾ ಸುದೀಪ್ ಸುದೀಪ್ ತಮ್ಮ ಚಾರಿಟಬಲ್ ಟ್ರಸ್ಟ್ ವತಿಯಿಂದ ಈಗಾಗಲೇ ಅನೇಕ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಾ ಬಂದಿದ್ದಾರೆ. ಸರ್ಕಾರಿ ಶಾಲೆಗಳನ್ನು ದತ್ತು ಪಡೆದು ಅಭಿವೃದ್ಧಿಗೆ ಮುಂದಾಗಿದ್ದಾರೆ. ಬಡವರ ವೈದ್ಯಕೀಯ ಖರ್ಚಿಗೆ ಹಣದ ಸಹಾಯ ಮಾಡಿದ್ದಾರೆ. ಮುಸ್ಲಿಂ ಯುವತಿಯ ಮದುವೆಗೆ ಸಹಾಯ ಮಾಡಿದ್ದಾರೆ. ಶಾಲಾ ಮಕ್ಕಳಿಗೆ ಆಗ್ಗಾಗ್ಗೆ ನೋಟ್ಬುಕ್ವಿತರಿಸುತ್ತಾರೆ. ಇದೀಗ ಮತ್ತೊಂದು ಹೆಜ್ಜೆ ಮುಂದಿಟ್ಟು ಸುದೀಪ್ ವೃದ್ಧಾಶ್ರಮ ಕಟ್ಟಿಸುತ್ತಿದ್ದಾರೆ.
ನಿನ್ನೆ ಸುದೀಪ್ ಪತ್ನಿ ಪ್ರಿಯಾ, ಬೆಂಗಳೂರು ಕೋಡಿಗೇನಹಳ್ಳಿಯ ನೈಸ್ ರಸ್ತೆಯಲ್ಲಿ ವೃದ್ಧಾಶ್ರಮಕ್ಕೆ ಭೂಮಿಪೂಜೆ ನೆರವೇರಿಸಿದ್ದಾರೆ. 2007 ರಲ್ಲಿ ಬಿಡುಗಡೆಯಾದ 'ನಂ 73, ಶಾಂತಿನಿವಾಸ ' ಸಿನಿಮಾ ನೆನಪಿರಬಹುದು. ಈ ಚಿತ್ರವನ್ನು ಸುದೀಪ್ ತಮ್ಮ ಸ್ವಂತ ಬ್ಯಾನರ್ ಮೂಲಕ ನಿರ್ಮಿಸಿ, ನಿರ್ದೇಶಿಸಿದ್ದರು. ಈಗ 'ಶಾಂತಿ ನಿವಾಸ ' ಹೆಸರಿನಲ್ಲಿ ಸುದೀಪ್ ವೃದ್ಧಾಶ್ರಮ ಕಟ್ಟಿಸಲು ಮುಂದಾಗಿದ್ದಾರೆ. ಈ ಮೂಲಕ ಮಕ್ಕಳಿಂದ ಶೋಷಣೆಗೆ ಒಳಗಾದ ವೃದ್ಧರು, ನಿರ್ಗತಿಕರಿಗೆ ನೆಲೆ ಒದಗಿಸುವ ಕಾರ್ಯ ಮಾಡುತ್ತಿದ್ದಾರೆ.
ವೃದ್ಧರಿಗೆ ನೆಲೆ ಒದಗಿಸುವುದು ಮಾತ್ರವಲ್ಲದೆ, ತಂದೆ ತಾಯಿಗಳನ್ನು ಮೂಲೆಗುಂಪು ಮಾಡುವ ಮಕ್ಕಳನ್ನು ಕರೆದು ಅವರಿಗೆ ಕೌನ್ಸಿಲಿಂಗ್ ಮಾಡುವ ಪ್ರಯತ್ನವನ್ನು ಕೂಡಾ ಈ ವೃದ್ಧಾಶ್ರಮದಲ್ಲಿ ಮಾಡಲಾಗುವುದಂತೆ. ಒಟ್ಟಿನಲ್ಲಿ ಸುದೀಪ್ ಹೆಸರಿಗೆ ತಕ್ಕಂತೆ ಬಡವರ ಪಾಲಿಗೆ ಸು'ದೀಪ'ನಾಗಲು ಹೊರಟಿದ್ಧಾರೆ.