'ಬಾಹುಬಲಿ'ಯ ಬಲ್ಲಾಳದೇವ ಖ್ಯಾತಿಯ ಟಾಲಿವುಡ್ ನಟ ರಾಣಾ ದಗ್ಗುಬಾಟಿ ಇಂದು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ತಾವು ಬಹಳ ವರ್ಷಗಳಿಂದ ಪ್ರೀತಿಸುತ್ತಿದ್ದ ಮಿಹಿಕಾ ಬಜಾಜ್ ಎಂಬುವವರನ್ನು ರಾಣಾ ಇಂದು ವರಿಸಲಿದ್ದಾರೆ.
ಕೆಲವು ದಿನಗಳ ಹಿಂದೆ ರಾಣಾ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಮಿಹಿಕಾ ಜೊತೆಗಿನ ಫೋಟೋವನ್ನು ಹಂಚಿಕೊಂಡು 'ಆ್ಯಂಡ್ ಶಿ ಸೆಡ್ ಯೆಸ್' ಎಂದು ಹೇಳಿಕೊಂಡಿದ್ದರು. ಆಗಲೇ ಅವರು ಪ್ರೀತಿಯಲ್ಲಿ ಇರುವ ವಿಚಾರ ಎಲ್ಲರಿಗೂ ತಿಳಿದದ್ದು. ಲಾಕ್ ಡೌನ್ ಸಮಯದಲ್ಲಿ ಈ ಜೋಡಿ ನಿಶ್ಚಿತಾರ್ಥ ಕೂಡಾ ಮಾಡಿಕೊಂಡಿತ್ತು. ಇಂದು ಹಿರಿಯರು ಸೇರಿ ಮದುವೆ ದಿನಾಂಕವನ್ನು ನಿಗದಿ ಮಾಡಿದ್ದಾರೆ. ಇಂದು ರಾತ್ರಿ 8.30 ಕ್ಕೆ ರಾಣಾ ಹಾಗೂ ಮಿಹಿಕಾ ಸತಿ ಪತಿಗಳಾಗಲಿದ್ದಾರೆ. ತೆಲುಗು ಹಾಗೂ ಮಾರ್ವಾಡಿ ಎರಡೂ ಸಂಪ್ರದಾಯದ ಪ್ರಕಾರ ಈ ಮದುವೆ ನಡೆಯಲಿದೆ.
ಕೊರೊನಾ ಸಮಸ್ಯೆ ಇರುವುದರಿಂದ ಎರಡೂ ಕುಟುಂಬದಿಂದ ಕೇವಲ 30 ಮಂದಿ ಮಾತ್ರ ಈ ಮದುವೆಗೆ ಹಾಜರಿರಲಿದ್ದಾರಂತೆ. ಆದರೆ ಬಾಲಿವುಡ್ ಸ್ನೇಹಿತರ ಸಮ್ಮುಖದಲ್ಲಿ ಮದುವೆಯಾಗುತ್ತಿಲ್ಲ ಎಂಬ ಬೇಸರ ರಾಣಾ ಅವರನ್ನು ಕಾಡುತ್ತಿದೆಯಂತೆ. ಈ ಕಾರಣಕ್ಕಾಗಿ ಅವರು ವರ್ಚ್ಯುಯಲ್ ರಿಯಾಲಿಟಿ ತಂತ್ರಜ್ಞಾನದ ಮೊರೆ ಹೋಗಿದ್ದಾರೆ. ಈ ಮೂಲಕ ವರ್ಚ್ಯುಯಲ್ ರಿಯಾಲಿಟಿ ತಂತ್ರಜ್ಞಾನವನ್ನು ಬಳಸಿಕೊಳ್ಳುತ್ತಿರುವ ಮೊದಲ ಸೆಲಬ್ರಿಟಿ ಎನಿಸಿಕೊಂಡಿದ್ದಾರೆ. ಈಗಾಗಲೇ ರಾಣಾ ಚಿತ್ರರಂಗದ ಗಣ್ಯರಿಗೆ ಈ ವಸ್ತುಗಳನ್ನು ಕಳಿಸಿಕೊಟ್ಟಿದ್ದಾರಂತೆ. ಮದುವೆ ದಿನ ಇದನ್ನು ಹೇಗೆ ಬಳಸಿಕೊಳ್ಳುವುದು ಎಂಬುದನ್ನು ಕೂಡಾ ವಿವರಿಸಿದ್ಧಾರಂತೆ. ಮದುವೆಗೆ ಹಾಜರಾಗದಿದ್ದರೂ ಈ ತಂತ್ರಜ್ಞಾನದ ಮೂಲಕ ಮದುವೆ ಸ್ಥಳದಲ್ಲೇ ಇರುವಂತೆ ಫೀಲ್ ಸಿಗಲಿದೆ.
ಹೈದರಾಬಾದ್ ರಾಮಾನಾಯ್ಡು ಸ್ಟುಡಿಯೋದಲ್ಲಿ ಮೊನ್ನೆಯಿಂದಲೇ ಮದುವೆ ಸಂಭ್ರಮ ಆರಂಭವಾಗಿದೆ. ನಿನ್ನೆ ಅರಿಶಿನ ಶಾಸ್ತ್ರ ಕೂಡಾ ನಡೆದಿದ್ದು ಇದಕ್ಕೆ ಸಂಬಂಧಿಸಿದ ವಿಡಿಯೋ ಹಾಗೂ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಆಗಿವೆ. ರಾಣಾ ದಗ್ಗುಬಾಟಿ, ತೆಲುಗು ನಿರ್ಮಾಪಕ ದಗ್ಗುಬಾಟಿ ಸುರೇಶ್ ಬಾಬು ಅವರ ಪುತ್ರ. ಇನ್ನು ಮಿಹಿಕಾ, ಹೈದರಾಬಾದ್ನಲ್ಲಿ ಡ್ಯೂ ಡ್ರಾಪ್ ಎಂಬ ಈವೆಂಟ್ ಮ್ಯಾನೇಜ್ಮೆಂಟ್ ಸಂಸ್ಥೆ ನಡೆಸುತ್ತಿದ್ದಾರೆ. ಒಟ್ಟಿನಲ್ಲಿ ಮೆಚ್ಚಿನ ನಟ ವೈವಾಹಿಕ ಜೀವನಕ್ಕೆ ಕಾಲಿಡುತ್ತಿರುವುದಕ್ಕೆ ಅಭಿಮಾನಿಗಳು ಸಂತೋಷ ವ್ಯಕ್ತಪಡಿಸಿದ್ದಾರೆ.